ಕಾಸರಗೋಡು: ಅನಂತಪುರಂ ಕೈಗಾರಿಕಾ ಪಾರ್ಕಿನಲ್ಲಿ ಚಟುವಟಿಕೆ ನಡೆಸುತ್ತಿರುವ ಪ್ರಾಣಿಗಳ ತ್ಯಾಜ್ಯದ ಸಂಸ್ಕರಣಾ ಘಟಕದಿಂದ ಹೊರಸೂಸುವ ದುರ್ವಾಸನೆ ಹಾಗೂ ಮಲಿನ ನೀರಿನಿಂದ ಈ ಪ್ರದೇಶದ ನಿವಾಸಿಗಳು ಜೀವನ ಸಾಗಿಸುವುದು ದುಸ್ತರವಾಗಿದೆ. ಈ ಬಗ್ಗೆ ನಾಗರಿಕ ಕ್ರಿಯಾ ಸಮಿತಿ ರಚಿಸಿ ಹೋರಾಟ ನಡೆಸಲಾಗುವುದು ಎಂದು 'ಅನಂತಪುರ ಉಳಿಸಿ'ಕ್ರಿಯಾ ಸಮಿತಿ ಪದಾಧಿಕಾರಿ ಟಿ.ಶೆರೀಫ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಅನಂತಪುರದಲ್ಲಿ ಮೂರು ತ್ಯಾಜ್ಯ ಸಂಸ್ಕರಣಾ ಘಟಕಗಳು ಕಾರ್ಯಾಚರಿಸುತ್ತಿದ್ದು, ಇವೆಲ್ಲವೂ ಮಾನದಂಡ ಉಲ್ಲಂಘಿಸಿ ಚಟುವಟಿಕೆ ನಡೆಸುತ್ತಿದೆ. ದುರ್ಗಂಧ ಹಾಗೂ ಮಲಿನ ನೀರಿನಿಂದ ಆಸುಪಾಸಿನ ನಾಲ್ಕೈದು ಕಿ.ಮೀ ವ್ಯಾಪ್ತಿಯ ಜನತೆಗೆ ರೋಗಬಾಧೆಯ ಭೀತಿ ಎದುರಾಗಿದೆ. ಕುರಿತು ಹಲವು ಬಾರಿ ಅಧಿಕಾರಿಗಳಿಗೆ ದೂರು ನೀಡಿದರೂ ಪ್ರಯೋಜನವಾಗಿಲ್ಲ. ಇದೇ ಪರಿಸ್ಥಿತಿ ಮುಂದುವರಿದರೆಅನಂತಪುರ ಪ್ರದೇಶವೂ ಮತ್ತೊಂದು "ಎಂಡೋಸಲ್ಫಾನ್ ದುಷ್ಪರಿಣಾಮಪೀಡಿತ'ಪ್ರದೇಶವಾಗಿ ಮಾರ್ಪಡುವ ಸಾಧ್ಯತೆಯಿದೆ. ಈ ಬಗ್ಗೆ ಅಧಿಕಾರಿಗಳ ಹಾಗೂ ಸರ್ಕಾರದ ಗಮನ ಸೆಳೆಯುವ ನಿಟ್ಟಿನಲ್ಲಿ ಏ. 4ರಂದು ಬೆಳಗ್ಗೆ 10ಕ್ಕೆ ಅನಂತಪುರ ಉಳಿಸಿ ಅಭಿಯಾನದೊಂದಿಗೆ ಕ್ರಿಯಾ ಸಮಿತಿ ವತಿಯಿಂದ ಅನಂತಪುರ ಕೈಗಾರಿಕಾ ಪ್ರಾಂಗಣ ತೆರಳುವ ರಸ್ತೆಯಲ್ಲಿ ವಾಹನ ಸಂಚಾರ ತಡೆ ಮುಷ್ಕರ ನಡೆಸಲಾಗುವುದು. ಮಧ್ಯಾಹ್ನ 12ರಿಂದ ಸಂಜೆ 5ರ ವರೆಗೆ ವಾಹನ ತಡೆದು ಪ್ರತಿಭಟನೆ ನಡೆಸಲಾಗುವುದು. ಪ್ರತಿಭಟನೆಯಲ್ಲಿ ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳು, ಜನಪ್ರತಿನಿದೀಗಳು, ಸಾಮಾಜಿಕ-ಸಾಂಸ್ಕøತಿಕ ರಂಗದ ಪ್ರಮುಖರು ಪಾಲ್ಗೊಳ್ಳುವರು.
ಜಿಲ್ಲೆಯ 28ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಸಾಯಿಖಾನೆ ತ್ಯಾಜ್ಯವನ್ನು ಅನಂತಪುರ ಕೈಗಾರಿಕಾ ಪ್ರಾಂಗಣದ ಈ ಘಟಕಗಳಿಗೆ ತಂದು ಸಂಸ್ಕರಿಸಲಾಗುತ್ತಿದ್ದು, ಇದರಿಂದ ಅನಂತಪುರ ಪ್ರದೇಶ ಕಸಾಯಿಖಾನೆ ಮಾಲಿನ್ಯದ ಗುಡರವಾಗಿ ಬದಲಾಗಿದೆ. ತ್ಯಾಜ್ಯಸಂಸ್ಕರಣಾ ಘಟಕ ಜನತೆಗೆ ಮಾತ್ರವಲ್ಲಿ ಇಲ್ಲಿನ ಅನಂತಪದ್ಮನಾಭ ಸ್ವಾಮಿ ದೇವಸ್ಥಾನ ಸೇರಿದಂತೆ ವಿವಿಧ ಆರಾಧನಾಲಯಗಳ ಶುಚಿತ್ವಕ್ಕೂ ಭೀತಿ ತಂದೊಡ್ಡುತ್ತಿದೆ. ಜನಪರ ಹೋರಾಟಕ್ಕೆ ಜಗ್ಗದಿದ್ದಲ್ಲಿ ಕಾನೂನು ಹೋರಾಟಕ್ಕೂ ತಯಾರಾಗುವುದಾಗಿ ತಿಳಿಸಿದರು. ಸುದ್ದಿಗೋಷ್ಠಿಯಲ್ಲಿ ಸುನಿಲ್ ಕುಮಾರ್, ಜನಾರ್ದನ ಕೆ, ಕೃಷ್ಣ ಆಳ್ವ, ಎ.ಕೆ ಅಶ್ರಫ್, ರಫೀಕ್ ಉಪಸ್ಥಿತರಿದ್ದರು.
ಅನಂತಪುರದ ತ್ಯಾಜ್ಯ ಸಂಸ್ಕರಣಾ ಘಟಕದಿಂದ ಸಂಕಷ್ಟ-ನಾಗರಿಕರಿಂದ ಪ್ರತಿಭಟನೆಗೆ ಸಿದ್ಧತೆ
0
ಏಪ್ರಿಲ್ 01, 2023