ನವದೆಹಲಿ: ದೇಶದಾದ್ಯಂತ ಗುರುವಾರ ಹನುಮಾನ್ ಜಯಂತಿಯನ್ನು ಶಾಂತಿಯುತವಾಗಿ ಆಚರಿಸಲು ಅನುವಾಗುವಂತೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಎಲ್ಲ ರಾಜ್ಯಗಳು/ಕೇಂದ್ರಾಡಳಿತ ಪ್ರದೇಶಗಳಿಗೆ ಕೇಂದ್ರ ಗೃಹ ಸಚಿವಾಲಯ ಸಲಹೆ ನೀಡಿದೆ.
'ಹನುಮಾನ್ ಜಯಂತಿ ಆಚರಣೆ ಸಂದರ್ಭದಲ್ಲಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಆಗದಂತೆ ಕ್ರಮ ಕೈಗೊಳ್ಳಬೇಕು.ಸಮಾಜದಲ್ಲಿನ ಶಾಂತಿ-ಸೌಹಾರ್ದವನ್ನು ಕೆಡಿಸುವಂತಹ ಸಂಗತಿಗಳ ಮೇಲೆ ಕಣ್ಗಾವಲಿರಿಸಬೇಕು' ಎಂದು ಸಚಿವಾಲಯವು ಬುಧವಾರ ಸೂಚಿಸಿದೆ.
ರಾಮ ನವಮಿ ಸಂದರ್ಭದಲ್ಲಿ ಪಶ್ಚಿಮ ಬಂಗಾಳ, ಬಿಹಾರದಲ್ಲಿ ಹಿಂಸಾಚಾರ ನಡೆದ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯವು ಈ ಸೂಚನೆಗಳನ್ನು ನೀಡಿದೆ.
ರಾಮ ನವಮಿ ಅಂಗವಾಗಿ ನಡೆದ ಶೋಭಾಯಾತ್ರೆ ವೇಳೆ ಪಶ್ಚಿಮ ಬಂಗಾಳದ ಹೂಗ್ಲಿ ಹಾಗೂ ಹೌರಾ ಜಿಲ್ಲೆಗಳಲ್ಲಿ ಹಿಂಸಾಚಾರ ಭುಗಿಲೆದ್ದಿತ್ತು. ಹಲವು ಅಂಗಡಿಗಳು ಹಾಗೂ ವಾಹನಗಳಿಗೆ ದುಷ್ಕರ್ಮಿಗಳು ಬೆಂಕಿ ಹಚ್ಚಿದ್ದರು.
ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಪಶ್ಚಿಮ ಬಂಗಾಳ ರಾಜ್ಯಪಾಲ ಸಿ.ವಿ.ಆನಂದ ಬೋಸ್ ಅವರೊಂದಿಗೆ ಮಾತನಾಡಿ, ವಸ್ತುಸ್ಥಿತಿ ಕುರಿತು ಮಾಹಿತಿ ಪಡೆದಿದ್ದರು. ಇದಕ್ಕೂ ಮುನ್ನ, ರಾಜ್ಯಪಾಲರು ಹಿಂಸಾಗ್ರಸ್ತ ಪ್ರದೇಶಗಳಿಗೆ ಭೇಟಿ ನೀಡಿದ್ದರು.
ಬಿಹಾರದ ಸಸಾರಾಮ್ ಹಾಗೂ ಬಿಹಾರ್ ಶರೀಫ್ ಪಟ್ಟಣಗಳಲ್ಲಿ ಕೂಡ ರಾಮ ನವಮಿ ದಿನ ಹಾಗೂ ನಂತರ ಹಿಂಸಾಚಾರ ಕಂಡುಬಂದಿತ್ತು. ಘಟನೆಗೆ ಸಂಬಂಧಿಸಿ ಪೊಲೀಸರು 170 ಜನರನ್ನು ಬಂಧಿಸಿದ್ದಾರೆ.
ಕೇಂದ್ರೀಯ ಪಡೆಗಳನ್ನು ಕರೆಸಿಕೊಳ್ಳಿ: ಕಲ್ಕತ್ತ ಹೈಕೋರ್ಟ್
ಹನುಮಾನ್ ಜಯಂತಿ ಆಚರಣೆ ಸಂದರ್ಭದಲ್ಲಿ ಶಾಂತಿ-ಸುವ್ಯವಸ್ಥೆ ಕಾಪಾಡುವಲ್ಲಿ ರಾಜ್ಯ ಪೊಲೀಸರಿಗೆ ನೆರವಾಗುವ ಸಲುವಾಗಿ ಕೇಂದ್ರೀಯ ಪಡೆಗಳನ್ನು ಕರೆಸಿಕೊಳ್ಳುವಂತೆ ಪಶ್ಚಿಮ ಬಂಗಾಳ ಸರ್ಕಾರಕ್ಕೆ ಕಲ್ಕತ್ತ ಹೈಕೋರ್ಟ್ ಬುಧವಾರ ನಿರ್ದೇಶನ ನೀಡಿದೆ.
'ಕಳೆದ ಕೆಲ ದಿನಗಳ ಹಿಂದಿನ ಅಹಿತಕರ ಘಟನೆಗಳ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ನಾವೆಲ್ಲ ಸುರಕ್ಷಿತವಾಗಿದ್ದು, ಯಾವುದೇ ಗಲಭೆಗಳಿಂದ ತಮಗೆ ಯಾವುದೇ ತೊಂದರೆಯಾಗದು ಎಂಬುದಾಗಿ ಜನರಿಗೆ ಭರವಸೆ ನೀಡುವ ಉದ್ದೇಶವನ್ನು ಕೂಡ ಈ ಆದೇಶ ಹೊಂದಿದೆ' ಎಂದು ಹೈಕೋರ್ಟ್ ಹೇಳಿದೆ.
ವಿಧಾನಸಭೆ ವಿರೋಧ ಪಕ್ಷದ ನಾಯಕ ಸುವೇಂದು ಅಧಿಕಾರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ವಿಚಾರಣೆ ನಡೆಸಿದ ಹಂಗಾಮಿ ಮುಖ್ಯ ನ್ಯಾಯಮೂರ್ತಿ ಟಿ.ಎಸ್.ಶಿವಜ್ಞಾನಮ್ ನೇತೃತ್ವದ ವಿಭಾಗೀಯ ನ್ಯಾಯಪೀಠ ಈ ನಿರ್ದೇಶನ ನೀಡಿತು.
'ರಾಜ್ಯದ ಮನವಿಗೆ ಸ್ಪಂದಿಸಿ, ಕೇಂದ್ರೀಯ ಪಡೆಗಳನ್ನು ಕಳುಹಿಸಿದ ಕೂಡಲೇ ಅವುಗಳ ನಿಯೋಜನೆಗೆ ಕ್ರಮ ಕೈಗೊಳ್ಳಬೇಕು. ಆ ಮೂಲಕ ಹನುಮಾನ್ ಜಯಂತಿ ಅಂಗವಾಗಿ ನಡೆಯುವ ಶೋಭಾಯಾತ್ರೆ ವೇಳೆ ಶಾಂತಿಭಂಗ ಆಗದಂತೆ ನೋಡಿಕೊಳ್ಳಬೇಕು' ಎಂದು ನ್ಯಾಯಪೀಠ ಸೂಚಿಸಿತು.
ಹನುಮಾನ್ ಜಯಂತಿ ಅಂಗವಾಗಿ ಮೆರವಣಿಗೆ ನಡೆಸಲು ಅನುಮತಿ ಕೋರಿ ಪೊಲೀಸ್ ಇಲಾಖೆಗೆ 2 ಸಾವಿರದಷ್ಟು ಅರ್ಜಿಗಳು ಸಲ್ಲಿಕೆಯಾಗಿವೆ ಎಂದು ಅಡ್ಡೊಕೇಟ್ ಜನರಲ್ ಎಸ್.ಎನ್.ಮುಖರ್ಜಿ ಅವರು ನ್ಯಾಯಪೀಠದ ಗಮನಕ್ಕೆ ತಂದರು.
ರಿಶಾರಾ: ನಿಷೇಧಾಜ್ಞೆ ಮುಂದುವರಿಕೆ
ಹಿಂಸಾಚಾರ ಪೀಡಿತ, ಹೂಗ್ಲಿ ಜಿಲ್ಲೆಯ ರಿಶಾರಾ ಪಟ್ಟಣದಲ್ಲಿ ನಿಷೇಧಾಜ್ಞೆಯನ್ನು ಬುಧವಾರವೂ ಮುಂದುವರಿಸಲಾಗಿದೆ. ಇಂಟರ್‌ನೆಟ್ ಸೇವೆಗಳನ್ನೂ ಸ್ಥಗಿತಗೊಳಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಹಿಂಸಾಚಾರ ಇಲ್ಲವೇ ಬೆಂಕಿ ಹಚ್ಚಿದ ಘಟನೆಗಳು ನಡೆದ ಬಗ್ಗೆ ವರದಿಗಳು ಬಂದಿಲ್ಲ. ಪಟ್ಟಣದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ ಎಂದು ಪೊಲೀಸ್ ಕಮಿಷನರೇಟ್‌ನ ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಭಾನುವಾರ ನಡೆದ ಹಿಂಸಾಚಾರಕ್ಕೆ ಸಂಬಂಧಿಸಿ ಕೆಲವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ.