ನವದೆಹಲಿ (PTI): ಜನಸಂಖ್ಯೆಯಲ್ಲಿ ಚೀನಾವನ್ನು ಹಿಂದಿಕ್ಕಿ ಜಗತ್ತಿನಲ್ಲೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿರುವ ದೇಶ ಎಂದು ಭಾರತ ಇಷ್ಟರಲ್ಲೇ ಹಣೆಪಟ್ಟಿ ಪಡೆಯಲಿದೆ.
ದೇಶದ ಜನಸಂಖ್ಯೆ ಹೆಚ್ಚಾಗುತ್ತಲೇ ಇರುವುದಕ್ಕೆ ಸಾಕ್ಷರತೆ ಕೊರತೆ, ಗರ್ಭನಿರೋಧ ಮತ್ತು ಗರ್ಭಪಾತದ ಕುರಿತು ಹೆಚ್ಚಿನ ಅರಿವು ಇಲ್ಲದಿರುವುದು ಹಾಗೂ ಆರ್ಥಿಕ ಕಾರಣಗಳ ಪ್ರಮುಖವಾಗಿವೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ರಾಷ್ಟ್ರೀಯ ಕುಟುಂಬ ಆರೋಗ್ಯ ಸಮೀಕ್ಷೆಯ ಅಂಕಿಅಂಶದ ಪ್ರಕಾರ ನಗರ ಪ್ರದೇಶಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಅಂದರೆ, ಶೇ 4ರಷ್ಟು ಪ್ರಮಾಣದಲ್ಲಿ ಗರ್ಭಪಾತಗಳು ನಡೆಯುತ್ತವೆ. ಗ್ರಾಮೀಣ ಪ್ರದೇಶದಲ್ಲಿ ಶೇ 2.5ರಷ್ಟು ಪ್ರಮಾಣದಲ್ಲಿ ಗರ್ಭಪಾತಗಳು ನಡೆಯುತ್ತವೆ.
ಶಾಲೆಗೆ ಹೋಗದ ಮಹಿಳೆಯರಲ್ಲಿ ಗರ್ಭಪಾತಕ್ಕೆ ಒಳಗಾಗುವವರ ಪ್ರಮಾಣ ಶೇ 1.9ರಷ್ಟು ಮಾತ್ರ. 10-11 ವರ್ಷ ಶಿಕ್ಷಣ ಪಡೆದಿರುವವರಲ್ಲಿ ಗರ್ಭಪಾತಕ್ಕೆ ಒಳಗಾಗುವವರ ಪ್ರಮಾಣ ಶೇ 3.5. ಬಡ ವರ್ಗಕ್ಕೆ ಸೇರಿದ ಮಹಿಳೆಯರಲ್ಲಿ ಗರ್ಭಪಾತಕ್ಕೆ ಒಳಗಾಗುವವರ ಪ್ರಮಾಣ ಶೇ 1.7, ಮಧ್ಯಮ ವರ್ಗದ ಮಹಿಳೆಯಲ್ಲಿ ಶೇ 4.1 ಮತ್ತು ಶ್ರೀಮಂತರಲ್ಲಿ ಶೇ 4.1ರಷ್ಟಿದೆ.
ಗರ್ಭ ನಿರೋಧದ ಕುರಿತು ತಪ್ಪು ಕಲ್ಪನೆ: 'ನಾಲ್ಕನೇ ಮಗುವಿಗೆ ಗರ್ಭಿಣಿ ಆಗುತ್ತಿದ್ದಂತೆ ವೈದ್ಯರಲ್ಲಿಗೆ ಹೋಗಿದ್ದೆ. ನಾನು ಪುನಃ ಗರ್ಭಿಣಿ ಆಗಿದ್ದಕ್ಕಾಗಿ ಅವರು ನನಗೆ ಬೈದರು. ಗರ್ಭ ಧರಿಸುವ ವಿಚಾರದಲ್ಲಿ ನನ್ನ ಅನುಮತಿಯನ್ನು ಕೇಳಲಾಗಿಲ್ಲ ಎಂಬುದು ಅವರಿಗೆ ಅರ್ಥವಾಗಲಿಲ್ಲ' ಎಂದು ನೋಯ್ಡಾದಲ್ಲಿ ಮನೆ ಕೆಲಸದ ಸಹಾಯಕಿಯಾಗಿರುವ ಛಾಯಾದೇವಿ ಹೇಳಿದ್ದಾರೆ.
ಛಾಯಾದೇವಿ ಅವರ ಪರಿಸ್ಥಿತಿಯೇ ದೇಶದ ಅನೇಕ ಮಹಿಳೆಯರ ಪರಿಸ್ಥಿತಿಯಾಗಿದೆ.
ಗರ್ಭನಿರೋಧದ ಕುರಿತು ಇರುವ ತಪ್ಪು ತಿಳಿವಳಿಕೆ, ಕುಟುಂಬ ಸದಸ್ಯರಿಂದ ಅಭಿಪ್ರಾಯ ಹೇರಿಕೆ, ಸಂತಾನ ನಿಯಂತ್ರಣ ಕ್ರಮಗಳ ಕುರಿತು ಪತಿಗಿರುವ ನಿರ್ಲಕ್ಷ್ಯ ಭಾವನೆಯಂಥ ಅಂಶಗಳು ಮಹಿಳೆಯರು ಹೆಚ್ಚು ಮಕ್ಕಳನ್ನು ಪಡೆಯಲು ಕಾರಣವಾಗಿವೆ ಎಂಬುದನ್ನು ಸಮೀಕ್ಷೆ ಕಂಡುಕೊಂಡಿದೆ.