ಶಿಯೋಪುರ್ : ಕುನೊ ರಾಷ್ಟ್ರೀಯ ಉದ್ಯಾನದ (ಕೆಎನ್‌ಪಿ) ವ್ಯಾಪ್ತಿಯಿಂದ ಭಾನುವಾರ ಹೊರಹೋಗಿದ್ದ 'ಒಬನ್' ಹೆಸರಿನ ಗಂಡು ಚೀತಾ ಶಿವಪುರಿ ಜಿಲ್ಲೆಯ ಮಾಧವ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಣಿಸಿಕೊಂಡಿದೆ ಎಂದು ಮಂಗಳವಾರ ಅಧಿಕಾರಿಗಳು ತಿಳಿಸಿದ್ದಾರೆ.
ಮಾಧವ ರಾಷ್ಟ್ರೀಯ ಉದ್ಯಾನವನಕ್ಕೆ ಇತ್ತೀಚೆಗಷ್ಟೇ 2 ಹುಲಿಗಳನ್ನು ಬಿಡಲಾಗಿದ್ದು, ಆ ಪ್ರದೇಶವನ್ನು 'ಒಬನ್' ಪ್ರವೇಶಿಸಿದೆ. ಮಂಗಳವಾರ 'ಒಬನ್'ನ ಚಲನವಲನವನ್ನು ದಾಖಲಿಸಿಕೊಳ್ಳಲಾಗಿದೆ ಎಂದು ಕೆಎನ್‌ಪಿಯ ವಿಭಾಗೀಯ ಅರಣ್ಯ ಅಧಿಕಾರಿ ಪ್ರಕಾಶ್ ಕುಮಾರ್ ವರ್ಮ ತಿಳಿಸಿದ್ದಾರೆ.
ಹುಲಿಗಳಿಂದ 'ಒಬನ್'ಗೆ ತೊಂದರೆ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರಿಸಿದ ವರ್ಮ, 'ಎಲ್ಲ ಪ್ರಾಣಿಗಳೂ ಅಪಾಯವನ್ನು ಅರಿತು ತಮ್ಮನ್ನು ತಾವು ರಕ್ಷಿಸಿಕೊಳ್ಳುತ್ತವೆ. ಹಾಗಾಗಿ ಏನೂ ಸಮಸ್ಯೆ ಆಗುವುದಿಲ್ಲ' ಎಂದರು.
ಕಳೆದ ವರ್ಷ ಸೆಪ್ಟೆಂಬರ್‌ನಲ್ಲಿ ನಮೀಬಿಯಾದಿಂದ ತಂದಿದ್ದ ಎಂಟು ಚೀತಾಗಳ ಪೈಕಿ ಇದೂ ಒಂದಾಗಿದೆ. ಈ ಮೊದಲು ಏಪ್ರಿಲ್ 2ರಂದು ಉದ್ಯಾನವನದಿಂದ 'ಒಬನ್' ಹೊರಹೋಗಿತ್ತು.