ಕೋಲ್ಕತ್ತ: ಜಾಗ ಅಕ್ರಮ ಒತ್ತುವರಿಗೆ ಸಂಬಂಧಿಸಿ ನೀಡಿರುವ ನೋಟಿಸ್‌ಗೆ ನೊಬೆಲ್ ಪುರಸ್ಕೃತ ಅರ್ಥಶಾಸ್ತ್ರಜ್ಞ ಅಮರ್ತ್ಯ ಸೆನ್ ಅವರು ಮುಂದಿನ ವಾರ ಪ್ರತಿಕ್ರಿಯೆ ನೀಡುವ ವಿಶ್ವಾಸವಿದೆ ಎಂದು ವಿಶ್ವ ಭಾರತಿ ಕೇಂದ್ರೀಯ ವಿಶ್ವವಿದ್ಯಾಲಯದ ವಕ್ತಾರರಾದ ಮಹುವ ಬ್ಯಾನರ್ಜಿ ತಿಳಿಸಿದ್ದಾರೆ.
ಒಂದು ವೇಳೆ ಅವರು ಪ್ರತಿಕ್ರಿಯೆ ನೀಡದಿದ್ದರೆ, ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿರುವ ಜಾಗವನ್ನು ತೆರವುಗೊಳಿಸಲು ಸೂಕ್ತ ನಿರ್ಧಾರ ತೆಗೆದುಕೊಳ್ಳಲಾಗುವುದು ಎಂದೂ ಹೇಳಿದ್ದಾರೆ.
'ಸೆನ್ ಅವರ ಶಾಂತಿನಿಕೇತನ ನಿವಾಸದ ಗೇಟ್ ಮೇಲೆ ನೋಟಿಸ್ ಹಚ್ಚಲಾಗಿದೆ ಮತ್ತು ಅವರಿಗೆ ಇ-ಮೇಲ್ ಮೂಲಕವೂ ಕಳುಹಿಸಲಾಗಿದೆ. ಏಪ್ರಿಲ್ 19ರಂದು ಮುಂದಿನ ಪ್ರಕ್ರಿಯೆ ಆರಂಭಿಸಲಾಗುವುದು' ಎಂದೂ ವಿವರಿಸಿದ್ದಾರೆ.
89 ವರ್ಷದ ಸೆನ್ ಅವರು ಸದ್ಯ ವಿದೇಶದಲ್ಲಿದ್ದಾರೆ. 1.38 ಎಕರೆ ಜಾಗವನ್ನು ಸೆನ್ ಅವರು ಅಕ್ರಮವಾಗಿ ಒತ್ತುವರಿ ಮಾಡಿಕೊಂಡಿದ್ದಾರೆ ಎಂದು ಕೇಂದ್ರೀಯ ವಿಶ್ವವಿದ್ಯಾಲಯವು ಆರೋಪಿಸಿದೆ.