ಕಾಸರಗೋಡು: ಜಿಲ್ಲೆಯ ಆರೋಗ್ಯ ವಲಯದಲ್ಲಿ ಸಕಾಲದಲ್ಲಿ ಅಭಿವೃದ್ಧಿಕಾರ್ಯಗಳನ್ನು ಕೈಗೊಳ್ಳುತ್ತಿದ್ದು, ಜಿಲ್ಲೆಯಲ್ಲಿ ಎರಡು ಸೂಪರ್ ಸ್ಪೆಷಲೈಸ್ಡ್ ಸೇವೆಗಳನ್ನು ಆರಂಭಿಸಲು ಸರ್ಕಾರಕ್ಕೆ ಸಾಧ್ಯವಾಗಿದೆ ಎಂದು ಆರೋಗ್ಯ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ವೀಣಾ ಜಾರ್ಜ್ ತಿಳಿಸಿದ್ದಾರೆ.
ಅವರು ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮಕ್ಕಳ ನವೀಕೃತ ವಾರ್ಡ್ ಹಾಗೂ ಅಸೌಖ್ಯಪೀಡಿತ ನವಜಾತ ಶಿಶು ಆರೈಕೆ ಘಟಕವನ್ನು ಬುಧವಾರ ಉದ್ಘಾಟಿಸಿ ಮಾತನಾಡಿದರು. ಆರೋಗ್ಯ ಕ್ಷೇತ್ರದಲ್ಲಿ ಕಾಸರಗೋಡು ಜಿಲ್ಲೆಗೆ ಸರ್ಕಾರ ಹೆಚ್ಚಿನ ಪರಿಗಣನೆ ನೀಡುತ್ತಿದೆ. ಕಾಸರಗೋಡು ತಾಲೂಕು ಆಸ್ಪತ್ರೆಯಲ್ಲಿ ನರರೋಗ ತಜ್ಞರ ಕೊರತೆಯನ್ನು ಮನಗಂಡು ಈ ಸರ್ಕಾರದ ಕಾಲಾವಧಿಯಲ್ಲಿ ಸೂಕ್ತ ಹುದ್ದೆಗೆ ನೇಮಕ ಮಾಡಿ ಅತ್ಯಾಧುನಿಕ ಚಿಕಿತ್ಸೆ ಲಭ್ಯವಾಗುವಂತೆ ನೋಡಿಕೊಳ್ಳಲಾಗಿದೆ. ಜಿಲ್ಲೆಗೆ ಅಗತ್ಯವಿರುವ ಹುದ್ದೆಗಳಿಗೆ ಅಧಿಕಾರಿಗಳು ಸಿಗದೇ ಇದ್ದಾಗ ಸರ್ಕಾರ ವಿಶೇಷ ಪ್ಯಾಕೇಜ್ ಮೂಲಕ ನೇಮಕಾತಿ ನಡೆಸಿದೆ. ಜಿಲ್ಲೆಯಲ್ಲಿನ 30 ಆರೋಗ್ಯ ಕೇಂದ್ರಗಳನ್ನು ಕುಟುಂಬ ಆರೋಗ್ಯ ಕೇಂದ್ರಗಳಾಗಿ ಮೇಲ್ದರ್ಜೆಗೇರಿಸಲಾಗಿದೆ. ತಾಲೂಕು ಆಸ್ಪತ್ರೆಯ ಎಸ್‍ಎನ್‍ಸಿಯುಗೆ 50 ಲಕ್ಷ ಹಾಗೂ ಪಿಐಸಿಗೆ 1.58 ಕೋಟಿ ರೂ. ವಿನಿಯೋಗಿಸಲಾಗಿದ್ದು, ಎರಡರಲ್ಲೂ ಅತ್ಯಾಧುನಿಕ ಚಿಕಿತ್ಸಾ ಸೌಲಭ್ಯಗಳನ್ನು ಅಳವಡಿಸಲಾಗಿದೆ ಎಂದು ತಿಳಿಸಿದರು.
ಶಾಸಕ ಎನ್.ಎ.ನೆಲ್ಲಿಕುನ್ನು ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು. ಕಾಸರಗೋಡು ನಗರಸಭಾ ಸ್ಥಾಯೀ ಸಮಿತಿ ಅಧ್ಯಕ್ಷರಾದ ಅಬ್ಬಾಸ್ ಬೇಗಂ, ಖಾಲಿದ್ ಪಚ್ಚಕಾಡ್, ಕೆ. ರಜನಿ,ಆರೋಗ್ಯ ಇಲಾಖೆ ನಿರ್ದೇಶಕ ಡಾ.ಕೆ.ಜೆ. ರೀನಾ, ಜಿಲ್ಲಾ ವೈದ್ಯಾಧಿಕಾರಿ ಡಾ. ಎ.ವಿ.ರಾಮದಾಸ್, ಎನ್ ಎಚ್ ಎಂ ಜಿಲ್ಲಾ ಕಾರ್ಯಕ್ರಮ ನಿರ್ವಾಹಕ ಡಾ.ರಿಜಿತ್ ಕೃಷ್ಣನ್, ಎಚ್‍ಎಂಸಿ ಸದಸ್ಯ ಕೆ.ಭಾಸ್ಕರನ್ ಉಪಸ್ಥಿತರಿದ್ದರು. ಕಾಸರಗೋಡು ನಗರಸಭಾ ಅಧ್ಯಕ್ಷ ವಕೀಲ .ವಿ.ಎಂ.ಮುನೀರ್ ಸ್ವಾಗತಿಸಿದರು. ಕಾಸರಗೋಡು ಜನರಲ್ ಆಸ್ಪತ್ರೆ ಅಧೀಕ್ಷಕ ಡಾ.ಕೆ.ಕೆ.ರಾಜಾರಾಂ ವಂದಿಸಿದರು.