ನವದೆಹಲಿ: ನೇಪಾಳದಲ್ಲಿರುವ ಮೌಂಟ್ ಅನ್ನಪೂರ್ಣದ ಕ್ಯಾಂಪ್ ನಿಂದ ನಾಪತ್ತೆಯಾಗಿದ್ದ ಭಾರತದ ಪರ್ವತಾರೋಹಿ ಅನುರಾಗ್ ಮಲು ಎಂಬುವವರು ಪತ್ತೆಯಾಗಿದ್ದಾರೆ.
ಅನುರಾಗ್ ಮಲು ಮೌಂಟ್ ಅನ್ನಪೂರ್ಣ ನ್ನು ಇಳಿಯುತ್ತಿದ್ದಾಗ ಕ್ಯಾಂಪ್ 3 ರಿಂದ ಸೋಮವಾರದಂದು, ನಾಪತ್ತೆಯಾಗಿದ್ದರು. ಆದರೆ ಅವರು 6000 ಮೀಟರ್ ಎತ್ತರದಿಂದ ಕಂದಕಕ್ಕೆ ಉರುಳಿಬಿದ್ದು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿತ್ತು.
ಗುರುವಾರದಂದು ಮಲು ಅವರ ಸಹೋದರ ಮಾತನಾಡಿದ್ದು, ಗಂಭೀರ ಸ್ಥಿತಿಯಲ್ಲಿ ಪತ್ತೆಯಾಗಿದ್ದು ಅವರನ್ನು ರಕ್ಷಿಸಲಾಗಿದೆ ಎಂದು ಹೇಳಿದ್ದಾರೆ. ರಾಜಸ್ಥಾನದ ಕಿಶನ್ಘರ್ ನ ನಿವಾಸಿಯಾಗಿರುವ ಮಲೂ (34) ಮೌಂಟ್ ಅನ್ನಪೂರ್ಣದ ಕ್ಯಾಂಪ್ 3 ರಿಂದ ಇಳಿಯುತ್ತಿದ್ದಾಗ ಉರುಳಿಬಿದ್ದು ನಾಪತ್ತೆಯಾಗಿದ್ದರು. ಮೌಂಟ್ ಅನ್ನಪೂರ್ಣ ಜಗತ್ತಿನಲ್ಲಿ 10 ನೇ ಅತಿ ಎತ್ತರದ ಪರ್ವತವಾಗಿದೆ.
"ಪರ್ವತಾರೋಹಿ ಅನುರಾಗ್ ಮಲು ಜೀವಂತವಾಗಿ ಪತ್ತೆಯಾಗಿದ್ದಾರೆ. ಅವರ ಆರೋಗ್ಯ ಸ್ಥಿತಿ ಗಂಭೀರವಾಗಿದ್ದು ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅವರು ಜೀವಂತವಾಗಿದ್ದಾರೆ" ಎಂದು ಅನುರಾಗ್ ಅವರ ಸಹೋದರ ಸುಧೀರ್ ಮಾಹಿತಿ ನೀಡಿದ್ದಾರೆ.