ನವದೆಹಲಿ: 'ಮದುವೆಯಾದ ನಂತರ ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ' ಎಂದು ಅಭಿಪ್ರಾಯಪಟ್ಟಿರುವ ಸುಪ್ರೀಂಕೋರ್ಟ್, ಕೆನಡಾ ನಿವಾಸಿ ಮಹಿಳೆಯೊಂದಿಗಿನ ತನ್ನ ಮದುವೆಯನ್ನು ರದ್ದುಗೊಳಿಸುವಂತೆ ಕೋರಿ ಮಂಗಳೂರು ಮೂಲದ ವೈದ್ಯ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿದೆ.
ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿಗಳಾದ ರಾಜೇಶ್ ಬಿಂದಲ್ ಹಾಗೂ ಅರವಿಂದ ಕುಮಾರ್ ಅವರಿದ್ದ ನ್ಯಾಯಪೀಠ, 'ಮದುವೆ ನಂತರ ಇಬ್ಬರು 40 ದಿನಗಳು ಮಾತ್ರ ಒಟ್ಟಿಗೆ ಜೀವನ ನಡೆಸಿದ್ದೀರಿ. ಹೊಂದಿಕೊಳ್ಳಲು ಸಮಯ ಬೇಕಾಗುತ್ತದೆ' ಎಂದು ದಂಪತಿಗೆ ಕಿವಿಮಾತು ಹೇಳಿದೆ.
'ಅರ್ಜಿದಾರರು ಕೋರಿರುವಂತೆ, ಸಂವಿಧಾನದ 142ನೇ ವಿಧಿಯಡಿ ದತ್ತವಾದ ವಿಶೇಷ ಅಧಿಕಾರವನ್ನು ಬಳಸಲು ಯೋಗ್ಯವಾದ ಪ್ರಕರಣವೂ ಇದಲ್ಲ' ಎಂದು ನ್ಯಾಯಪೀಠ ಹೇಳಿತು.
ವಿಚ್ಛೇದನ ಕೋರಿ ಪತಿ ದಾಖಲಿಸಿರುವ ಪ್ರಕರಣವನ್ನು ಮಂಗಳೂರಿನಿಂದ ಮುಂಬೈನ ಕೋರ್ಟ್‌ಗೆ ವರ್ಗಾಯಿಸಬೇಕು ಎಂದು ಕೋರಿ ಪತ್ನಿ ಸಲ್ಲಿಸಿದ್ದ ಅರ್ಜಿಯನ್ನೂ ನ್ಯಾಯಪೀಠ ವಜಾಗೊಳಿಸಿತು.
ಮುಂಬೈನಿಂದ ಮಂಗಳೂರಿಗೆ ಪ್ರಯಾಣಿಸಲು ತಗುಲುವ ವೆಚ್ಚವನ್ನು ಭರಿಸುವುದಕ್ಕೆ ಸಂಬಂಧಿಸಿ ಯಾವುದೇ ಆದೇಶ ನೀಡಲು ನಿರಾಕರಿಸಿದ ನ್ಯಾಯಪೀಠ, ಈ ಕುರಿತು ಕೌಟುಂಬಿಕ ನ್ಯಾಯಾಲಯಕ್ಕೆ ಆಕೆ ಅರ್ಜಿ ಸಲ್ಲಿಸಬಹುದು ಎಂದು ಹೇಳಿತು.
'ದಂಪತಿ ಮಗು ಹೊಂದಿರದ ಕಾರಣ, ಮಗುವಿನ ಪಾಲನೆಯ ಪ್ರಶ್ನೆಯೇ ಉದ್ಭವಿಸದು. ಇಬ್ಬರೂ ಸುಶಿಕ್ಷಿತರಾಗಿದ್ದು, ಉದ್ಯೋಗದಲ್ಲಿದ್ದಾರೆ. ಆಕೆ ವಿಚಾರಣೆಗಾಗಿ ಮಂಗಳೂರಿಗೆ ತೆರಳಬಹುದು. ಅಗತ್ಯ ಬಿದ್ದರೆ, ಖುದ್ದು ಹಾಜರಾತಿಯಿಂದ ವಿನಾಯಿತಿ ಕೋರಿ ಅರ್ಜಿ ಸಲ್ಲಿಸಬಹುದು' ಎಂದೂ ನ್ಯಾಯಪೀಠ ಹೇಳಿತು.
ವೈದ್ಯ ಹಾಗೂ ಕೆನಡಾ ಮೂಲದ ಮಹಿಳೆಗೆ 2019ರ ಡಿಸೆಂಬರ್‌ನಲ್ಲಿ ಫೇಸ್‌ಬುಕ್ ಮೂಲಕ ಪರಿಚಯವಾಗಿತ್ತು. 2020ರ ಡಿಸೆಂಬರ್ 5ರಂದು ಮಂಗಳೂರಿನಲ್ಲಿ ಕ್ರೈಸ್ತ ಧರ್ಮದ ವಿಧಿ-ವಿಧಾನಗಳಂತೆ ಮದುವೆಯಾಗಿದ್ದಾರೆ.
ಮದುವೆಯಾಗಿ 40 ದಿನಗಳ ನಂತರ, ಮಹಿಳೆ ಮುಂಬೈಗೆ ತೆರಳಿ ಖಾಸಗಿ ಬ್ಯಾಂಕ್‌ನಲ್ಲಿ ಕೆಲಸ ಸೇರಿದ್ದರು. ನಂತರ, ಪತ್ನಿ ಅವಮಾನಿಸುತ್ತಾಳೆ ಎಂದು ಆರೋಪಿಸಿದ್ದ ವೈದ್ಯ, ವಿಚ್ಛೇದನ ಕೋರಿ ಅರ್ಜಿ ಸಲ್ಲಿಸಿದ್ದರು. ಈ ಆರೋಪಗಳನ್ನು ತಿರಸ್ಕರಿಸಿದ್ದ ಮಹಿಳೆ, 'ನನ್ನನ್ನು ಅವಮಾನಿಸಿ, ಕೆಟ್ಟದಾಗಿ ನಡೆಸಿಕೊಳ್ಳಲಾಗಿತ್ತು' ಎಂದಿದ್ದಾರೆ.