ಬದಿಯಡ್ಕ: ಬದಿಯಡ್ಕ: ದೋಷಗಳು ಕ್ಲೇಷಗಳನ್ನು ತೊಳೆದು ಶುದ್ಧಮಾಡಲು ದೇವಸ್ಥಾನಗಳು ಇರುತ್ತವೆ. ಜವಾಬ್ದಾರಿಯುತವಾಗಿ ದೇವಸ್ಥಾನಗಳನ್ನು ನಡೆಸಿಕೊಂಡು ದೋಷಗಳು ಉಂಟಾಗದಂತೆ ಜಾಗೃತರಾಗಬೇಕು. ನೀರು ಹರಿದುಬರುವಂತೆ ಮಹಾವಿಷ್ಣುವು ಕೃಪೆಯಾಗಿ ಹರಿದು ಬಂದು ಮಾನ್ಯದ ಕಾರ್ಮಾರು ಆಗಲಿದೆ ಎಂದು ಶ್ರೀರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳು ಆಶೀರ್ವಚನವನ್ನು ನೀಡಿದರು.
ನೀರ್ಚಾಲು ಮಾನ್ಯ ಸಮೀಪದ ಕಾರ್ಮಾರು ಶ್ರೀ ಮಹಾವಿಷ್ಣು ದೇವಸ್ಥಾನದ ಜೀರ್ಣೋದ್ಧಾರ ಪ್ರಯುಕ್ತ ಪ್ರಶ್ನೆಚಿಂತನೆಯಲ್ಲಿ ಕಂಡುಬಂದ ಪ್ರಕಾರ ಕ್ಷೇತ್ರದ ಸಮಿತಿಯ ವತಿಯಿಂದ ನಡೆಸಿದ ಗುರುಪಾದುಕಾ ಪೂಜೆಯನ್ನು ಸ್ವೀಕರಿಸಿ ಅವರು ಅನುಗ್ರಹ ಭಾಷಣ ಮಾಡಿದರು.
ಹಳೇ ಪರ್ವ ಕಳೆದು ಹೊಸ ಪರ್ವ ಆರಂಭವಾದ ಮಂಗಳದಿನ. ಶುಭಗಳ ಸರಣಿಯ ಹೊಸಕಾಲ ಪ್ರಾರಂಭವಾಗಲಿ. ವರ್ಷಗಳ ನಂತರ ನಡೆದ ಪಾದಪೂಜೆಯಿಂದ ಸಂತಸವುಂಟಾಗಿದೆ. ಲೋಪದೋಷಗಳು ಪರಿಹಾರವಾಗಿ ದೇವಸ್ಥಾನವು ಮತ್ತೆ ವೈಭವಯುತವಾಗಿ ಮೆರೆಯುವಂತಾಗಬೇಕು ಎಂದರು.
ಕ್ಷೇತ್ರದ ಮಾತೃಸಮಿತಿಯ ವತಿಯಿಂದ ಶ್ರೀಗಳನ್ನು ಪೂರ್ಣಕುಂಭ ಸ್ವಾಗತನೀಡಿ ಬರಮಾಡಿಕೊಳ್ಳಲಾಯಿತು. ಸೇವಾಸಮಿತಿಯ ಅಧ್ಯಕ್ಷ ಪುದುಕೋಳಿ ಶ್ರೀಕೃಷ್ಣ ಭಟ್ ದಂಪತಿಗಳು ಪಾದಪೂಜೆಯನ್ನು ನೆರವೇರಿಸಿದರು.
ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಕೃಷ್ಣಮೂರ್ತಿ ಪುದುಕೋಳಿ, ಪ್ರಧಾನ ಕಾರ್ಯದರ್ಶಿ ಮಹೇಶ್ ವಳಕ್ಕುಂಜ, ಕಾರ್ಯಾಧ್ಯಕ್ಷ ರಾಮ ಕಾರ್ಮಾರು, ಯುವಕವೃಂದದ ಅಧ್ಯಕ್ಷ ನಾರಾಯಣ ಉಳ್ಳೋಡಿ, ಮಾತೃಸಂಘದ ಅಧ್ಯಕ್ಷೆ ಜ್ಯೋತಿ ಕಾರ್ಮಾರು, ಗ್ರಾಮಪಂಚಾಯಿತಿ ಜನಪ್ರತಿನಿಧಿ ಶ್ಯಾಮಪ್ರಸಾದ ಮಾನ್ಯ, ವಿವಿಧ ಸಮಿತಿಗಳ ಪದಾಧಿಕಾರಿಗಳು, ಆಡಳಿತ ಸಮಿತಿ ಸದಸ್ಯರು, ಮುಳ್ಳೇರಿಯ ಹವ್ಯಕ ಮಂಡಲದ ಅಧ್ಯಕ್ಷ ಬಾಲಸುಬ್ರಹ್ಮಣ್ಯ ಸರ್ಪಮಲೆ, ಕಾರ್ಯದರ್ಶಿ ಕೃಷ್ಣಮೂರ್ತಿ ಮಾಡಾವು, ಮಾತೃತ್ವಮ್ ಅಧ್ಯಕ್ಷೆ ಈಶ್ವರಿ ಬೇರ್ಕಡವು, ಭಕ್ತಾದಿಗಳು ಪಾಲ್ಗೊಂಡಿದ್ದರು.