ನಾಗ್ಪುರ: ಭಾರತೀಯ ಮಾಧ್ಯಮಗಳು ಪ್ರಬಲವಾಗಿದ್ದು, ಜಾಗತಿಕವಾಗಿ ತನ್ನ ಛಾಪು ಮೂಡಿಸಿವೆ. ಆದರೆ ಕೆಲವು ವಿದೇಶದ ಮಾಧ್ಯಮ ಸಂಸ್ಥೆಗಳು ದೇಶದಲ್ಲಿನ ಕೋವಿಡ್-19 ನಿರ್ವಹಣೆ ವಿಚಾರದಲ್ಲಿ ಸುಳ್ಳು ಸುದ್ದಿ ಹಬ್ಬಿಸಿವೆ. ದೇಶದ ಪ್ರತಿಷ್ಠೆಯನ್ನು ಹಾಳು ಮಾಡುವ ಇಂಥ ಅಜೆಂಡಾ ಕೇವಲ ಹೊರಗಿನಿಂದ ನಡೆಯುತ್ತಿಲ್ಲ.
ಬದಲಾಗಿ, ಈ ವಿಷಯದಲ್ಲಿ ದೇಶದೊಳಗಿನ ಕೆಲವು ನಾಯಕರ ವೈಯಕ್ತಿಕ ಆಸಕ್ತಿಯಿದೆ ಎಂದು ಕೇಂದ್ರ ಮಾಹಿತಿ ಮತ್ತು ಪ್ರಸಾರಖಾತೆ ಸಚಿವ ಅನುರಾಗ್ ಠಾಕೂರ್ ಭಾನುವಾರ ಹೇಳಿದರು.
ಅವರು ಲೋಕಮತ ಪತ್ರಿಕೆಯ ರಾಷ್ಟ್ರೀಯ ಸಮಾವೇಶದಲ್ಲಿ 'ಭಾರತೀಯ ಮಾಧ್ಯಮಗಳು ಸಂಪೂರ್ಣವಾಗಿ ಪೂರ್ವಾಗ್ರಹ ಪೀಡಿತವೇ?' ಎಂಬ ವಿಷಯದ ಬಗ್ಗೆ ಮಾತನಾಡಿದರು.
ಕಾರ್ಯಕ್ರಮದಲ್ಲಿ ನೆರೆದ ಪತ್ರಕರ್ತರನ್ನು ಹಾಗೂ ಬುದ್ಧಿಜೀವಿಗಳನ್ನು ಉದ್ದೇಶಿಸಿ ಮಾತನಾಡಿ,' ದೇಶದಲ್ಲಿನ ಮಾಧ್ಯಮಗಳು ಹಿಂದೆ ಸ್ವತಂತ್ರವಾಗಿತ್ತು, ಈಗಲೂ ಹಾಗೇ ಇವೆ, ಮುಂದೆಯೂ ಇರಲಿವೆ. ಕೆಲವು ರಾಜಕೀಯ ಪಕ್ಷಗಳು ತಮ್ಮ ಬಜೆಟ್‌ನ ಹೆಚ್ಚಿನ ಪ್ರಮಾಣವನ್ನು ಜನರ ಅಭಿವೃದ್ಧಿ ಮತ್ತು ಕಲ್ಯಾಣಕ್ಕಾಗಿ ಬಳಸುವುದಕ್ಕಿಂತ ಹೆಚ್ಚಾಗಿ ತಮ್ಮ ಕಲ್ಯಾಣ ಮತ್ತು ಸ್ವ-ಪ್ರಶಂಸೆಗಾಗಿ ಮಾಧ್ಯಮಗಳನ್ನು ಬಳಸುತ್ತಿವೆ. ಇದರ ಪರಿಣಾಮ ಸುದ್ದಿ ವರದಿಗಳಲ್ಲಿ ಕಂಡುಬರುತ್ತದೆ. ಎಂಟರಿಂದ ಒಂಬತ್ತು ಪತ್ರಿಕೆಗಳು ಒಂದೇ ರೀತಿಯ ಹೆಡ್ಡಿಂಗ್ ಹೊಂದಿರುವುದು ಕಂಡುಬರುತ್ತದೆ. ಇದು ಒಂದು ಬಾರಿಯಲ್ಲ 50 ಬಾರಿ ಸಂಭವಿಸುತ್ತವೆ' ಎಂದು ವಿವರಿಸಿದರು.
ಈ ನಡುವೆ ವಿದೇಶೀ ಮಾಧ್ಯಮ ಸಂಸ್ಥೆಗಳ ವಿರುದ್ಧ ಹರಿಹಾಯ್ದ ಠಾಕೂರ್,'ಗಂಗಾ ನದಿಯಲ್ಲಿ ಮೃತ ದೇಹಗಳು ತೇಲುತ್ತಿವೆ ಎಂದು ಅಲ್ಲಿನ ಮಾಧ್ಯಮ ವರದಿಗಳಲ್ಲಿ ತೋರಿಸಲಾಗಿದೆ. ಇದು ನಿಜವಲ್ಲ, ಸತ್ಯವನ್ನು ಪರಿಶೀಲಿಸದೆ ಆ ವರದಿಗಳನ್ನು ಪ್ರಕಟಿಸಿದವು. ಇದರಿಂದ ಕೇವಲ ಒಬ್ಬ ವ್ಯಕ್ತಿಯ ಇಮೇಜ್ ಹಾಳಾಗುವುದು ಮಾತ್ರವಲ್ಲದೇ ಇಡೀ ದೇಶದ ಪ್ರತಿಷ್ಠೆ ಹಾಳಾಗುತ್ತದೆ. ಇದೊಂದು ಪ್ರಚಾರದ ಕಾರ್ಯಸೂಚಿಯಷ್ಟೇ. ಇದನ್ನು ದೇಶದೊಳಗಿದ್ದುಕೊಂಡೇ ಅನೇಕ ನಾಯಕರು ಸ್ವಹಿತಾಸಕ್ತಿಗಳಿಗಾಗಿ ಬಳಸಿಕೊಂಡರು' ಎಂದರು.