ಕೊಲ್ಕತ್ತಾ: ವಿಶ್ವ ಭಾರತಿ ವಿಶ್ವವಿದ್ಯಾಲಯವು (Visva-Bharati University) ನೊಬೆಲ್ ಪ್ರಶಸ್ತಿ ಪುರಸ್ಕೃತ ಅಮರ್ತ್ಯ ಸೇನ್ (Amartya Sen) ಅವರಿಗೆ ಒತ್ತುವರಿ ತೆರವು ಆದೇಶ ಜಾರಿಗೊಳಿಸಿ ಅವರು ಅನಧಿಕೃತವಾಗಿ ಬಳಸುತ್ತಿದ್ದಾರೆನ್ನಲಾದ 13 ದಶಮಾಂಶ ಜಮೀನನ್ನು ಮೇ 6ರೊಳಗೆ ಅಥವಾ ಎಪ್ರಿಲ್19ರಂದು ನೀಡಲಾದ ಸೂಚನೆಯ 15 ದಿನಗಳೊಳಗೆ ತೆರವುಗೊಳಿಸಬೇಕೆಂದು ಸೂಚಿಸಿದೆ.
ಭಾರತ ಸರ್ಕಾರದ ಸುತ್ತೋಲೆಗಳು ಮತ್ತು ಸಿಎಜಿ ವರದಿಗಳ ಪಾಲನೆ ಮಾಡುವ ದೃಷ್ಟಿಯಿಂದ ಈ ಶತಮಾನದಷ್ಟು ಹಳೆಯದಾದ ವಿಶ್ವವಿದ್ಯಾಲಯವು ಒತ್ತುವರಿಗಳನ್ನು ತೆರವುಗೊಳಿಸಿ ಸಚಿವಾಲಯಕ್ಕೆ ವರದಿ ಸಲ್ಲಿಸುವ ಅಗತ್ಯವಿದೆ ಎಂದು ನೋಟಿಸಿನಲ್ಲಿ ಹೇಳಲಾಗಿದೆ.
"ಅಮರ್ತ್ಯ ಕುಮಾರ್ ಸೇನ್ ಮತ್ತು ಇತರ ಎಲ್ಲಾ ಸಂಬಂಧಿತರನ್ನು ತೆರವುಗೊಳಿಸಲು ಅಗತ್ಯವಿದ್ದರೆ ಬಲ ಪ್ರಯೋಗ ಮಾಡಲಾಗುವುದು. ಈ 13 ದಶಮಾಂಶ ಜಮೀನು 50 ಅಡಿ 11 ಅಡಿ ವಿಸ್ತೀರ್ಣ ಹೊಂದಿದ್ದು ವಿವಿಯ ವಾಯುವ್ಯ ಪ್ರದೇಶದಲ್ಲಿದೆ," ಎಂದು ನೋಟಿಸ್ ಹೇಳಿದೆ.
ಅವರು ಕಾನೂನುಬದ್ಧವಾಗಿ 1.25 ಎಕರೆ ಜಮೀನು ಮಾತ್ರ ಹೊಂದಿರಬಹುದಾಗಿದೆ (ಲೀಸ್ ಅವಧಿಯ ಉಳಿದ ಸಮಯಕ್ಕಾಗಿ). ಅವರು ಅಲ್ಲಿ 1.38 ಎಕರೆ ಜಮೀನು ಬಳಸುವಂತಿಲ್ಲ," ಎಂದು ಜಂಟಿ ರಿಜಿಸ್ಟ್ರಾರ್ ಆಶಿಷ್ ಮಹತೊ ಅವರ ನೋಟಿಸ್ ಹೇಳಿದೆ.
ಸೇನ್ ಅವರ ಪೂರ್ವಜರ ಮನೆ ʻಪ್ರತಿಚಿʼ ಶಾಂತಿನಿಕೇತನದಲ್ಲಿದ್ದು, ಅವರು ಶಾಂತಿನಿಕೇತನಕ್ಕೆ ಬಂದಾಗಲೆಲ್ಲಾ ಅಲ್ಲಿಯೇ ಉಳಿದುಕೊಳ್ಳುತ್ತಾರೆ.
ಕೆಲ ದಿನಗಳ ಹಿಂದೆ ವಿಶ್ವ ಭಾರತಿ ವಿಶ್ವವಿದ್ಯಾಲಯವು ಸೇನ್ ಅವರಿಗೆ ನೋಟಿಸ್ ಜಾರಿಗೊಳಿಸಿತ್ತು. ಆದರೆ ಇದಕ್ಕೆ ಅವರು ನೀಡಿದ್ದ ಉತ್ತರ ಸಮರ್ಪಕವಾಗಿಲ್ಲ ಹಾಗೂ ಈ ಜಮೀನಿನ ಕಾನೂನುಬದ್ಧ ಒಡೆತನ ವಿಶ್ವ ಭಾರತಿಗೆ ಸೇರಿದ್ದು ಎಂದು ಸಂಸ್ಥೆ ಹೇಳಿದೆ.
ಆದರೆ ಅಮರ್ತ್ಯ ಸೇನೆ ಅವರು ಆರೋಪ ನಿರಾಕರಿಸುತ್ತಾರೆ. 1.25 ಎಕರೆ ಜಮೀನನ್ನು ವಿಶ್ವ ಭಾರತಿ ಸಂಸ್ಥೆ ಅವರ ತಂದೆಗೆ ನಿರ್ದಿಷ್ಟ ಅವಧಿಗೆ ಲೀಸಿಗೆ ನೀಡಿದ್ದರೆ ಈಗ ಪ್ರಸ್ತಾಪಿಸಲಾಗಿರುವ 13 ದಶಮಾಂಶ ಜಮೀನನ್ನು ತಮ್ಮ ತಂದೆ ಖರೀದಿಸಿದ್ದರು, ಇದಕ್ಕೆ ಪೂರಕವಾದ ಎಲ್ಲಾ ದಾಖಲೆಗಳು ತಮ್ಮ ಬಳಿ ಇವೆ ಎಂದು ಅವರು ಹೇಳುತ್ತಿದ್ದಾರೆ.