ನ್ಯೂಯಾರ್ಕ್: ಮಂಗಳವಾರ ಡೊನಾಲ್ಡ್ ಟ್ರಂಪ್ ಪೊಲೀಸರೆದುರು ಶರಣಾಗುವ ನಿರೀಕ್ಷೆ ಇದ್ದು, ಇದರ ಬೆನ್ನಿಗೇ ನಗರದಾದ್ಯಂತ ಭಾರಿ ಪ್ರತಿಭಟನೆಗಳು ಜರುಗುವ ಸಾಧ್ಯತೆ ಇರುವುದರಿಂದ ನ್ಯೂಯಾರ್ಕ್ ನಗರ ಪೊಲೀಸರು ಟ್ರಂಪ್ ಟವರ್ ಸುತ್ತ ತಡೆಗೋಡೆಯನ್ನು ನಿರ್ಮಿಸಿದ್ದು, ಮ್ಯಾನ್ಹಾಟನ್ ಕ್ರಿಮಿನಲ್ ನ್ಯಾಯಾಲಯದ ಮಾರ್ಗವಾಗಿ ತೆರಳುವ ರಸ್ತೆಗಳನ್ನು ಮುಚ್ಚಿದ್ದಾರೆ ಎಂದು ndtv.com ವರದಿ ಮಾಡಿದೆ.
ನೀಲಿ ಚಿತ್ರದ ನಟಿಯೊಬ್ಬರಿಗೆ ದುಡ್ಡಿನ ಪ್ರಲೋಭನೆ ಒಡ್ಡಲಾಗಿದೆ ಎಂಬ ಪ್ರಕರಣದ ಕುರಿತು ತನಿಖೆ ನಡೆಸಿದ ಮುಖ್ಯ ನ್ಯಾಯಾಧೀಶರು ಅವರ ವಿರುದ್ಧ ದೋಷಾರೋಪ ನಿಗದಿಗೊಳಿಸಿರುವುದರಿಂದ ಮಾಜಿ ಅಧ್ಯಕ್ಷರಾದ ಡೊನಾಲ್ಡ್ ಟ್ರಂಪ್ ಮಂಗಳವಾರ ಮಧ್ಯಾಹ್ನ ನ್ಯಾಯಾಲಯಕ್ಕೆ ಆಗಮಿಸುವ ಸಾಧ್ಯತೆ ಇದೆ. ತಮ್ಮ ವಿರುದ್ಧ ಕ್ರಿಮಿನಲ್ ಪ್ರಕರಣ ಎದುರಿಸುತ್ತಿರುವ ಪ್ರಥಮ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಆಗಿದ್ದಾರೆ.
ತಮ್ಮ ವಿರುದ್ಧದ ತನಿಖೆಯನ್ನು ಡೊನಾಲ್ಡ್ ಟ್ರಂಪ್ ದುಷ್ಟ ರಾಜಕೀಯ ಬೇಟೆ ಎಂದು ಬಣ್ಣಿಸಿದ್ದರೆ, ರಿಪಬ್ಲಿಕನ್ ಸಂಸದ ಮಾರ್ಜೋರಿ ಟೇಲರ್ ಸೇರಿದಂತೆ ಹಲವಾರು ನಿಷ್ಠ ಬೆಂಬಲಿಗರು ನಾವು ಇದರ ವಿರುದ್ಧ ಪ್ರತಿಭಟಿಸಲು ನ್ಯೂಯಾರ್ಕ್‌ಗೆ ತೆರಳುವುದಾಗಿ ಘೋಷಿಸಿದ್ದಾರೆ. ಹೀಗಾಗಿ ಡೌನ್‌ಟೌನ್ ನ್ಯಾಯಾಲಯ, ಹೋಮ್ ಟು ಕ್ರಿಮಿನಲ್ ಹಾಗೂ ಸುಪ್ರೀಂಕೋರ್ಟ್‌ಗಳು ಡೊನಾಲ್ಡ್ ಟ್ರಂಪ್ ಹಾಜರಾತಿಗೂ ಮುನ್ನ ಹಲವು ವಿಚಾರಣಾ ಕೊಠಡಿಗಳನ್ನು ಸ್ಥಗಿತಗೊಳಿಸಲಿವೆ ಎಂದು ನ್ಯಾಯಾಲಯದ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಈ ನಡುವೆ, ನಗರಕ್ಕೆ ಯಾವುದೇ ವಿಶ್ವಾಸಾರ್ಹ ಬೆದರಿಕೆಗಳಿಲ್ಲ ಎಂದು ನ್ಯೂಯಾರ್ಕ್ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಅಂತರ್ಜಾಲ ಉಗ್ರ ಚಟುವಟಿಕೆಗಳ ಮೇಲೆ ನಿಗಾ ವಹಿಸುವ ಸೈಟ್ ಇಂಟಲಿಜೆನ್ಸ್ ಗ್ರೂಪ್ ಪ್ರಕಾರ, ಡೋನಾಲ್ಡ್ ಟ್ರಂಪ್ ಮೇಲೆ ದೋಷಾರೋಪ ನಿಗದಿಗೊಳಿಸಿರುವ ಮ್ಯಾನ್ಹಾಟನ್ ಜಿಲ್ಲಾ ಅಟಾರ್ನಿ ಆಲ್ವಿನ್ ಬ್ರ್ಯಾಗ್ ಹಾಗೂ ನ್ಯಾಯಾಧೀಶರನ್ನು ವಿಚಾರಣೆಗೊಳಪಡಿಸಬೇಕು ಎಂದು ಕೆಲವು ಸಾಮಾಜಿಕ ಮಾಧ್ಯಮ ಬಳಕೆದಾರರು ಒತ್ತಾಯಿಸಿದ್ದಾರೆ.