ಕಾಸರಗೋಡು: ಪ್ರಧಾನಿ ನರೇಂದ್ರ ಮೋದಿ ಅವರು ಹಸಿರುನಿಶಾನಿ ತೋರಿಸಿ ತಿರುವನಂತಪುರದಿಂದ ಮಂಗಳವಾರ ಬೀಳ್ಕೊಟ್ಟ ವಂದೇಭಾರತ್ ಎಕ್ಸ್‍ಪ್ರೆಸ್ ರೈಲು ಕಾಸರಗೋಡು ನಿಲ್ದಾಣಕ್ಕೆ ರಾತ್ರಿ ಆಗಮಿಸಿ, ತಿರುವನಂತಪುರಕ್ಕಿರುವ ತನ್ನ ಔಪಚಾರಿಕ ಸಂಚಾರವನ್ನು ಬುಧವಾರ ಆರಂಭಿಸಿದೆ. ಕಾಸರಗೋಡು ರೈಲ್ವೆ ನಿಲ್ದಾಣದ ಮೂರನೇ ಪ್ಲ್ಯಾಟ್‍ಫಾರ್ಮಿನಿಂದ ವಂದೇಭಾರತ್ ರೈಲು ಮಧ್ಯಾಹ್ನ 2.30ಕ್ಕೆ ಜಿಲ್ಲೆಯಿಂದ ರಾಜಧಾನಿ ತಿರುವನಂತಪುರಕ್ಕಿರುವ ತನ್ನ ಮೊದಲ ಯಾನವನ್ನು ಆರಂಭಿಸಿತು.
ಮಂಗಳವಾರ ರಾತ್ರಿ ನಿಲ್ದಾಣಕ್ಕೆ ಆಗಮಿಸಿದ ರೈಲಿಗೆ ಅದ್ದೂರಿ ಸ್ವಾಗತ ನೀಡಲಾಯಿತು. ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ, ಪ್ಯಾಸೆಂಜರ್ಸ್ ಅಸೋಸಿಯೇಶನ್ ಪ್ರಧಾನ ಕಾರ್ಯದರ್ಶಿ ಆರ್. ಪ್ರಶಾಂತ್, ಮುಸ್ಲಿಂಲೀಗ್ ಕಾರ್ಯದರ್ಶಿ ಮಾಹಿನ್ ಕೇಲೋಟ್, ಕಾಸರಗೋಡು ರೈಲ್ವೆ ಮೆನೇಜರ್ಸ್ ಅಸೋಸಿಯೇಶನ್ ಪದಾಧಿಕಾರಿಗಳು ನಿಲ್ದಾಣದಲ್ಲಿ ಹಾಜರಿದ್ದು ರೈಲಿಗೆ ಸ್ವಾಗತ ನೀಡಿದರು. ತಿರುವನಂತಪುರದಿಂದ ಆಗಮಿಸಿದ ರೈಲ್ವೆ ಸಲಹಾ ಸಮಿತಿ ಸದಸ್ಯ ಪಿ.ಕೆ ಕೃಷ್ಣದಾಸ್ ಅವರನ್ನಿ ಬಿಜೆಪಿ ಮುಖಮಡರು ಬರಮಾಡಿಕೊಂಡರು. ವಂದೇಭಾರತ್ ರೈಲು ಸೇವೆಯನ್ನು ಇದೇ ಮೊದಲ ಬಾರಿಗೆ ಮಂಜೂರು ಮಾಡುವ ಮೂಲಕ ರಾಜ್ಯದ ಅಭಿವೃದ್ಧಿಗೆ ಮಹತ್ವದ ಕೊಡುಗೆಯನ್ನು ನೀಡಿರುವುದಾಗಿ ತಿಳಿಸಿದರು.