ಪೆರ್ಲ: ಅಂತರ್ಜಲ ಮಟ್ಟ ಗಣನೀಯವಾಗಿ ಕುಸಿಯುತ್ತಿರುವ ಕಾಲಘಟ್ಟದಲ್ಲಿ ವೈದ್ಯರೊಬ್ಬರು ಕೊರೆಸಿದ ಕೊಳವೆಬಾವಿಯಿಂದ ಬತ್ತಿಬರಡಾಗಿದ್ದ ಕೆರೆ, ಬಾವಿಗಳಲ್ಲಿ ನೀರು ಏಕಾಏಕಿ ಏರಿಕೆಯಾಗುವುದರ ಜತೆಗೆ ತೋಡುಗಳಲ್ಲಿ ನೀರಿನ ಹರಿವು ಕಾಣಿಸಿಕೊಂಡು ಅಚ್ಚರಿಗೆ ಕಾರಣವಾಗಿದೆ.
ಎಣ್ಮಕಜೆ ಪಂಚಾಯಿತಿಯ ಖಂಡಿಗೆ ಮುನ್ನುಮೂಲೆ ಪ್ರದೇಶದಲ್ಲಿ ನಡೆದಿರುವ ಅಚ್ಚರಿಯ ಬೆಳವಣಿಗೆ. ಈ ಪ್ರದೇಶದಲ್ಲಿ ಹೊಸದಾಗಿ ನಿರ್ಮಿಸಲಾದ ಕೊಳವೆಬಾವಿಯೊಂದರಲ್ಲಿ ನೀರು ಮೇಲಕ್ಕೆ ಚಿಮ್ಮುತ್ತಿದ್ದಂತೆ ಆಸುಪಾಸಿನ ಕೆರೆಬಾವಿಗಳು ಮತ್ತೆ ಜೀವಪಡೆದುಕೊಳ್ಳಲಾರಂಭಿಸಿದೆ.
ಇಲ್ಲಿನ ನಿವಾಸಿ ಪೆರ್ಲ ಪ್ರಾಥಮಿಕ ಆರೊಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಕೇಶವ ನಾಯ್ಕ ಅವರಿಗೆ ಕುಡಿಯುವ ನೀರಿಗೂ ತತ್ವಾರ ಎದುರಾದ ಹಿನ್ನೆಲೆಯಲ್ಲಿ ತಮ್ಮ ಜಮೀನಿನಲ್ಲಿ ವಾರದ ಹಿಂದೆ ಕೊಳವೆಬಾವಿ ನಿರ್ಮಿಸಿಕೊಂಡಿದ್ದರು. ಸುಮಾರು 120 ಅಡಿ ವರೆಗೆ ಕೊಳವೆಬಾವಿ ನಿರ್ಮಾಣವಾಗುತ್ತಿದ್ದಂತೆ ನೀರು ಹೊರಚಿಮ್ಮಲಾರಂಭಿಸಿತ್ತು. ಇದನ್ನು 300ಅಡಿ ಆಳಕ್ಕೆ ಕೊರೆಯುತ್ತಿದ್ದಂತೆ ಮತ್ತಷ್ಟು ನೀರು ಲಭ್ಯವಾಗಿ ಮುಂದಕ್ಕೆ ಡ್ರಿಲ್ ನಡೆಸಲಾಗದ ಸ್ಥಿತಿ ನಿರ್ಮಾಣವಾಗಿತ್ತು.
ಒಂದು ಊರಲ್ಲಿ ಹೊಸದಾಗಿ ಕೊಳವೆ ಬಾವಿ ನಿರ್ಮಾಣವಾಗುತ್ತಿದ್ದರೆ, ಕನಿಷ್ಠ ಒಂದೆರಡು ಕೊಳವೆಬಾವಿ, ತೆರೆದ ಬಾವಿಗಳಿಗೆ ಹಾನಿ ಸಂಭವಿಸುವುದು ಖಚಿತ. ಅದೇ ಆತಂಕ ಡಾ. ಕೇಶವ ನಾಯ್ಕ ಅವರ ಮನೆ ವಠಾರದ ಜನತೆಗೂ ಕಾಡಿತ್ತು. ಆದರೆ ಹಾಗಾಗಲಿಲ್ಲ. ಡಾಕ್ಟರ್ ಅವರ ಕೊಳವೆಬಾವಿ ನಿರ್ಮಾಣ ಪೂರ್ತಿಗೊಳ್ಳುತ್ತಿದ್ದಂತೆ ಆಸುಪಾಸಿನ ಜನತೆಯ ಮೊಗದಲ್ಲಿ ಮಂದಹಾಸಕ್ಕೆ ಕಾರಣವಾಗಿತ್ತು. ತಮ್ಮ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದ್ದರೆ, ಬತ್ತಿ ಬರಡಾಗಿದ್ದ ತೋಡಿನಲ್ಲಿ ನೀರಿನ ಒರತೆಯೊಂದಿಗೆ ಜೀವಜಲ ಹರಿದು ಸಾಗಲಾರಂಭಿಸಿದೆ. ಬಜಕೂಡ್ಲು ರೇಶನ್ ಅಂಗಡಿ ಎದುರಿನ ಕಾಟಿಪಳ್ಳ, ಕಣಿಯಕ್ಕಿ, ಖಂಡಿಗೆ ಹಾದಿಯಾಗಿ ಹರಿಯುವ ತೋಡು ಜನವರಿ ತಿಂಗಳಿಗೆ ಬರಡಾಗುತ್ತಿದೆ. ಈ ಬಾರಿಯೂ ಬತ್ತಿಬರಡಾಗಿದ್ದ ಈ ತೋಡು ಏಕಾಏಕಿ ಮರುಜೀವಪಡೆದುಕೊಂಡಿದೆ. ತೋಡಿನಲ್ಲಿ ನೀರು ಹರಿಯಲಾರಂಭಿಸಿದೆ. ಜಲಚರಗಳು ಮತ್ತೆ ಹುಟ್ಟಿಕೊಂಡಿದೆ. ಏಕಾಏಕಿ ನೀರಿನ ಹರಿವು ಕಾಣಿಸಿಕೊಂಡಿರುವ ಬಗ್ಗೆ ಖಂಡಿಗೆ ಮುನ್ನುಮೂಲೆ ಪ್ರದೇಶದ ಜನತೆ ಸಂತಸ ಹಂಚಿಕೊಳ್ಳುತ್ತಿದ್ದಾರೆ. ಇಲ್ಲಿನ ನಿವಾಸಿಗಳಾದ ಗೋಪಾಲಕೃಷ್ಣ ಭಟ್, ಬಾಲಕೃಷ್ಣ, ಜಯರಾಮ, ಕುಞ ನಾಯ್ಕ, ಹರೀಶ್, ರವಿ ಮುಂತಾದವರ ಕೆರೆ, ಬಾವಿಗಳಲ್ಲಿ ನೀರಿನ ಮಟ್ಟ ಏರಿಕೆಯಾಗಿದೆ.