ಮುಂಬೈ: ಮಹಾರಾಷ್ಟ್ರ ಮುಖ್ಯಮಂತ್ರಿ ಏಕನಾಥ್ ಶಿಂಧೆ ಶಿವಸೇನಾ
ನಾಯಕತ್ವದ ವಿರುದ್ಧ ಬಂಡಾಯವೇಳುವ ಮುನ್ನಾ ಬಿಜೆಪಿಗೆ ಬರದಿದ್ದರೆ ಕೇಂದ್ರೀಯ
ಸಂಸ್ಥೆಯಿಂದ ಬಂಧಿಸಲಾಗುತ್ತದೆ ಎಂದು ತಮ್ಮ ನಿವಾಸದಲ್ಲಿ ಕಣ್ಣೀರಿಟ್ಟಿದ್ದರು ಎಂದು
ಶಿವಸೇನೆ (ಯುಬಿಟಿ) ನಾಯಕ ಆದಿತ್ಯ ಠಾಕ್ರೆ ಹೇಳಿದ್ದಾರೆ.
ಆದರೆ, ಅವರ ಹೇಳಿಕೆಯನ್ನು ಶಿಂಧೆ ನೇತೃತ್ವದ ಶಿವಸೇನೆಯ ಶಾಸಕ ಸಂತೋಷ್ ಬಂಗಾರ್ ಠಾಕ್ರೆ ಅಲ್ಲಗಳೆದಿದ್ದಾರೆ. ಬಿಜೆಪಿಯಿಂದ ಅಂತಹ ಯಾವುದೇ ಬೆದರಿಕೆ ಇರಲಿಲ್ಲ ಎಂದಿದ್ದಾರೆ. ಎನ್ ಸಿಪಿ ಮತ್ತು ಕಾಂಗ್ರೆಸ್ ಜೊತೆಗಿನ ಮೈತ್ರಿಯೇ ಬಂಡಾಯದ ಹಿಂದಿದ್ದ ಕಾರಣ ಎಂದು ಬಂಗಾರ್ ಹೇಳಿದ್ದಾರೆ. ಶಿಂಧೆ ವಿರುದ್ಧದ ಆರೋಪಗಳು ಸುಳ್ಳು, ಅವರು ಎಂದಿಗೂ ಕಣ್ಣೀರು ಇಡುವವರಲ್ಲ ಎಂದು ಕೇಂದ್ರ ಸಚಿವ ರಾಮದಾಸ್ ಅಠಾವಳೆ ಪ್ರತಿಕ್ರಿಯಿಸಿದ್ದಾರೆ.
ಬುಧವಾರ ವಿಶಾಖಪಟ್ಟಣಂನ ವಿಶ್ವವಿದ್ಯಾನಿಲಯದಲ್ಲಿ ಸಂವಾದದಲ್ಲಿ ಮಾತನಾಡಿದ ಮಹಾರಾಷ್ಟ್ರದ ಮಾಜಿ ಸಿಎಂ ಉದ್ಧವ್ ಠಾಕ್ರೆ ಅವರ ಪುತ್ರ ಆದಿತ್ಯ ಠಾಕ್ರೆ, ಹಣ ಮತ್ತು ತಮ್ಮ ಸ್ವಂತ ಸ್ಥಾನಕ್ಕಾಗಿ ಶಿವಸೇನಾ ನಾಯಕತ್ವದ ವಿರುದ್ಧ ಬಂಡಾಯವೆದಿದ್ದರು. ಈಗಿನ ಮುಖ್ಯಮಂತ್ರಿ (ಶಿಂಧೆ) ಬಿಜೆಪಿ ಸೇರದಿದ್ದರೆ ತನನ್ನು ಕೇಂದ್ರೀಯ ತನಿಖಾ ಸಂಸ್ಥೆಯಿಂದ ಬಂಧಿಸಲಾಗುತ್ತದೆ ಎಂದು ನಮ್ಮ ಮನೆಯಲ್ಲಿ ಕಣ್ಣೀರಿಟ್ಟಿದ್ದರು. ಶಿಂಧೆ ಅವರನ್ನೇ ನಿಜವಾದ ಶಿವಸೇನಾ ನಾಯಕ ಎಂದು ತೋರಿಸಲು ಬಯಸಿದ್ದ ಬಿಜೆಪಿ ಅವರನ್ನೇ ಸಿಎಂ ಮಾಡಿತು ಎಂದರು.
ಕಾಂಗ್ರೆಸ್ ಜೊತೆಗಿನ ಮೈತ್ರಿಯನ್ನು ಸಮರ್ಥಿಸಿಕೊಂಡ ಠಾಕ್ರೆ, "ಬಿಜೆಪಿಯ ವಾಟ್ಸಾಪ್ ವಿಶ್ವವಿದ್ಯಾನಿಲಯ" ಕಲಿಸುವುದಕ್ಕಿಂತ ತನ್ನ ಅಜ್ಜನಿಂದಲೇ ಹೆಚ್ಚು ಕಲಿತಿದ್ದೇನೆ. ಬಿಜೆಪಿ "ಭಯೋತ್ಪಾದಕರನ್ನು ಬೆಂಬಲಿಸುವ" ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಪಿಡಿಪಿ) ಯೊಂದಿಗೆ ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿದರು. ಆದಿತ್ಯ ಠಾಕ್ರೆ ಅವರ ಹೇಳಿಕೆಗಳು ನಿಜ ಎಂದು ಶಿವಸೇನಾ (ಯುಬಿಟಿ) ನಾಯಕ ಸಂಜಯ್ ರಾವುತ್ ಹೇಳಿದ್ದಾರೆ.