ಬುರ್ಹಾನ್‌ಪುರ್ : 'ಸಮಾಜವು ನಮ್ಮೊಂದಿಗೆ ಇಲ್ಲ ಎಂಬುದಾಗಿ ಜನರು ಭಾವಿಸಿದಾಗ, ಮಿಷನರಿಗಳು ಆ ಪರಿಸ್ಥಿತಿಯ ಲಾಭವನ್ನು ಪಡೆಯಲು ಯತ್ನಿಸುತ್ತವೆ' ಎಂದು ರಾಷ್ಟ್ರೀಯ ಸ್ವಯಂಸೇವಕ ಸಂಘದ (ಆರ್‌ಎಸ್‌ಎಸ್) ಮುಖ್ಯಸ್ಥ ಮೋಹನ್ ಭಾಗವತ್ ಭಾನುವಾರ ಹೇಳಿದ್ದಾರೆ.
ಇಲ್ಲಿ ನಡೆದ ಗೋವಿಂದನಾಥ ಮಹಾರಾಜರ ಸಮಾಧಿಯ ಉದ್ಘಾಟನೆ ಕಾರ್ಯಕ್ರಮದಲ್ಲಿ ಧಾರ್ಮಿಕ ಮತಾಂತರವನ್ನು ಉಲ್ಲೇಖಿಸಿ ಮಾತನಾಡಿದ ಅವರು, 'ನಾವು ನಮ್ಮ ಸ್ವಂತ ಜನರ ಬಗ್ಗೆಯೇ ಕಾಳಜಿ ವಹಿಸುವುದಿಲ್ಲ. ಅವರ ಬಳಿ ಹೋಗಿ ಏನು ಸಮಸ್ಯೆ ಎಂದು ಕೇಳುವುದಿಲ್ಲ. ಆದರೆ, ಸಾವಿರಾರು ಮೈಲಿಗಳಿಂದ ಇಲ್ಲಿಗೆ ಬಂದ ಕೆಲವು ಮಿಷನರಿಗಳು ನಮ್ಮಲ್ಲಿಯೇ ಉಳಿದು, ನಮ್ಮ ಆಹಾರವನ್ನೇ ಸೇವಿಸಿ, ನಮ್ಮ ಭಾಷೆಯನ್ನೇ ಮಾತನಾಡಿ, ನಮ್ಮ ಜನರನ್ನು ಮತಾಂತರಿಸುತ್ತಾರೆ. 100 ವರ್ಷಗಳ ಅವಧಿಯಲ್ಲಿ ಎಲ್ಲವನ್ನೂ ಬದಲಾಯಿಸಲು ಅವರು ಇಲ್ಲಿಗೆ ಬಂದರು. ಆದರೆ, ನಮ್ಮ ಪೂರ್ವಜರ ಪ್ರಯತ್ನದಿಂದಾಗಿ ನಮ್ಮ ಬೇರುಗಳು ಗಟ್ಟಿಯಾಗಿ ಉಳಿದಿವೆ' ಎಂದು ಹೇಳಿದ್ದಾರೆ.