ಮುಂಬೈ: ಛತ್ತೀಸಗಢದ ಗಣಿಯೊಂದರಲ್ಲಿ ಹೊರತೆಗೆಯದ ಲಕ್ಷಾಂತರ ಟನ್ ಕಲ್ಲಿದ್ದಲು ಹಾಗೆಯೇ ಉಳಿದಿರುವಾಗ ಕೇಂದ್ರದ ನರೇಂದ್ರ ಮೋದಿ ಸರ್ಕಾರ ರಾಜ್ಯದಲ್ಲಿ ಗಣಿಗಾರಿಕೆಗಾಗಿ 3,000 ಹೆಕ್ಟೇರ್ ಅರಣ್ಯ ಜಮೀನನ್ನು ತೆರವುಗೊಳಿಸಲು ಅನುಮತಿ ನೀಡಿ ಅದಾನಿ ಸಂಸ್ಥೆಗೆ ಸಹಕರಿಸಿತ್ತು ಎಂದು ತಿಳಿದು ಬಂದಿದೆ ಎಂದು thewire.in ವರದಿ ಮಾಡಿದೆ.
ಅದಾನಿ ಸಮೂಹಕ್ಕೆ ತನ್ನ ಗಣಿಗಾರಿಕೆ ಪ್ರದೇಶವನ್ನು ಹಸ್ದಿಯೋ ಆರಂದ್ ಅರಣ್ಯ ಪ್ರದೇಶದಲ್ಲಿ ಸರ್ಕಾರ ಅನುಮತಿಸಿತ್ತು. ಈ ಪ್ರದೇಶವು ಮಧ್ಯ ಭಾರತದಲ್ಲಿ ಇನ್ನೂ ಯಾವುದೇ ರೀತಿಯಲ್ಲಿ ಅಭಿವೃದ್ಧಿ ಕಾಮಗಾರಿಗಳಿಂದ ಬಾಧಿತವಾಗದ ಅರಣ್ಯ ಪ್ರದೇಶವಾಗಿದೆ.
ಇಂಡಿಯನ್ ಕೌನ್ಸಿಲ್ ಆಫ್ ಫಾರೆಸ್ಟ್ರಿ ರಿಸರ್ಚ್ ಎಂಡ್ ಎಜುಕೇಶನ್ ಮತ್ತು ವೈಲ್ಡ್‌ಲೈಫ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಹಸ್ದಿಯೋ ಆರಂದ್ ಗಣಿ ಪ್ರದೇಶದಲ್ಲಿ ಮೇ 2019 ಹಾಗೂ ಫೆಬ್ರವರಿ 2021 ರಲ್ಲಿ ಅಧ್ಯಯನ ನಡೆಸಿತ್ತು. ಇಲ್ಲಿ ಕಲ್ಲಿದ್ದಲು ಪಡೆಯಲು ನಿರೀಕ್ಷಿತ ಪ್ರಮಾಣಕ್ಕಿಂತ ಕಡಿಮೆ ಮಣ್ಣು ಅಗೆಯಲಾಗಿತ್ತು ಎಂದು ತಿಳಿದು ಬಂದಿತ್ತು ಆದರೂ ಅದಾನಿ ಸಂಸ್ಥೆಗೆ ಇನ್ನಷ್ಟು ಅರಣ್ಯ ಜಮೀನಿನಲ್ಲಿ ಗಣಿಗಾರಿಕೆಗೆ ಅನುಮತಿಸಲಾಗಿತ್ತು ಎಂದು ವರದಿಯಾಗಿದೆ.
ಗಣಿ ವಿಸ್ತರಣೆಗೆ ಫೆಬ್ರವರಿ 2022 ರಲ್ಲಿ ಅನುಮತಿ ನೀಡುವ ವೇಳೆ ಮೋದಿ ಸರ್ಕಾರ ಅದರ ಪರಿಸರ ಪರಿಣಾಮವನ್ನು ನಿಲಕ್ಷಿಸಿತ್ತು ಎಂದು ವರದಿಯೊಂದು ಹೇಳಿದೆ.
ಅದಾನಿ ಸಂಸ್ಥೆಯು ಪರ್ಸಾ ಈಸ್ಟ್ ಮತ್ತು ಕಂತ ಬಸನ್ ಎಂಬಲ್ಲಿ 2013 ರಿಂದ ರಾಜಸ್ಥಾನ ರಾಜ್ಯ ವಿದ್ಯುತ್ ಉತ್ಪಾನದ ನಿಗಮ್ ಲಿಮಿಟೆಡ್ ಪರವಾಗಿ ನಡೆಸುತ್ತಿದೆ. ರಾಜಸ್ಥಾನ ಸರ್ಕಾರ ಮತ್ತು ಅದಾನಿ ಸಮೂಹದ ನಡುವಿನ ಒಪ್ಪಂದ ಕೂಡ ಚರ್ಚೆಗೆ ಕಾರಣವಾಗಿದೆ ಎಂದು ವರದಿಯಾಗಿದೆ. ರಾಜಸ್ಥಾನ ಸರ್ಕಾರ ಅದಾನಿ ಸಂಸ್ಥೆಯನ್ನು ಗಣಿಗಾರಿಕೆ ಗುತ್ತಿಗೆದಾರನಾಗಿ ಮಾತ್ರ ಒಪ್ಪಂದಕ್ಕೆ ಸಹಿ ಹಾಕದೆ ಶೇ 74 ಪಾಲದಾರಿಕೆ ನೀಡಿತ್ತು. ಈ ಒಪ್ಪಂದ 2007ರದ್ದಾಗಿದ್ದು ಆಗ ರಾಜಸ್ಥಾನದಲ್ಲಿ ಬಿಜೆಪಿ ಸರ್ಕಾರವಿತ್ತು. ಈಗ ಅಲ್ಲಿ ಕಾಂಗ್ರೆಸ್ ಸರ್ಕಾರವಿದ್ದರೂ ಈ ಯೋಜನೆ ಮುಂದುವರಿದಿದೆ.
ಯೋಜನೆಯ ಎರಡನೇ ಹಂತಕ್ಕೆ 1.137 ಹೆಕ್ಟೇರ್ ಅರಣ್ಯ ಪ್ರದೇಶದಲ್ಲಿ 2.5 ಲಕ್ಷ ಮರಗಳನ್ನು ಕಡಿಯಲು ಅರಣ್ಯ ಅನುಮತಿಗಾಗಿ ರಾಜಸ್ಥಾನ ಸರ್ಕಾರ ಪರಿಸರ ಸಚಿವಾಲಯವನ್ನು ಕೋರಿತ್ತು.
ಫೆಬ್ರವರಿ 2022 ರಲ್ಲಿ ಕೇಂದ್ರ ಪರಿಸರ ಸಚಿವಾಲಯವು ವಿಸ್ತರಣಾ ಯೋಜನೆಗೆ ಅರಣ್ಯ ಸಂರಕ್ಷಣಾ ಕಾಯಿದೆ 1980 ಅನ್ವಯ ಅನುಮತಿಸಿತ್ತು. ಆದರೆ ಅರಣ್ಯ ಭೂಮಿ ರಕ್ಷಣೆಗಾಗಿ ಜನರಿಂದ ಸತತ ಒತ್ತಡ ಎದುರಿಸುತ್ತಿದ್ದ ಛತ್ತೀಸಗಢ ಸರ್ಕಾರ ಅಂತಿಮ ಅನುಮೋದನೆಯನ್ನು ತಡೆಹಿಡಿದಿದೆ.