ಖಾರ್ಟೂಮ್: ಸುಡಾನ್‌ನ ರಾಜಧಾನಿ ಖಾರ್ಟೂಮ್ ಮತ್ತು ಒಂಡರ್ಮನ್ ನಗರದಲ್ಲಿ ಸೇನೆ ಮತ್ತು ಅರೆಸೇನಾ ಪಡೆಯ ನಡುವಿನ ಘರ್ಷಣೆ ಸೋಮವಾರವೂ ಮುಂದುವರಿದಿದ್ದು, ಮೃತರ ಸಂಖ್ಯೆ 97ಕ್ಕೆ ಏರಿದೆ.
ಉಭಯ ನಗರಗಳಲ್ಲಿ ವಾಯುದಾಳಿ ಮತ್ತು ಶೆಲ್ ಪ್ರಯೋಗ ತೀವ್ರಗೊಂಡಿದೆ.
ಸೇನಾ ನೆಲೆಯಿಂದ ದಾಳಿಯ ಶಬ್ದ ನಿರಂತರವಾಗಿ ಕೇಳಿಬರುತ್ತಿದೆ. ಆ ಸ್ಥಳದಲ್ಲಿ ದಟ್ಟವಾದ ಹೊಗೆ ಆಗಸವನ್ನು ಆವರಿಸಿಕೊಂಡಿದೆ. ಲೂಟಿ, ದಾಂದಲೆ ಘಟನೆಗಳು ವರದಿಯಾಗಿವೆ. ನಿವಾಸಿಗಳು ಆತಂಕದಿಂದ ಮನೆಗಳಲ್ಲಿ ಅಡಗಿಕೊಂಡಿದ್ದಾರೆ.
ಸೇನೆಯ ಕಮಾಂಡರ್ ಆಗಿರುವ ಜನರಲ್ ಅಬ್ದೆಲ್ ಫತಾಹ್ ಬುರ‍್ಹಾನ್ ಮತ್ತು ಅರೆಸೇನಾ ಪಡೆಯಾದ ರ‍್ಯಾಪಿಡ್ ಸಪೋರ್ಟ್ ಫೋರ್ಸ್‌ನ (ಆರ್‌ಎಸ್‌ಎಫ್) ಜನರಲ್ ಮೊಹಮ್ಮದ್ ಹಮ್ದನ್ ಡಾಗಲೊ ನಡುವೆ ಅಧಿಕಾರದ ಮೇಲೆ ಪ್ರಾಬಲ್ಯ ಹೊಂದಲು ನಡೆದಿರುವ ತಿಕ್ಕಾಟ ಈ ಘರ್ಷಣೆಗೆ ಕಾರಣವಾಗಿದೆ.
ಈ ಇಬ್ಬರೂ ಸಂಧಾನದಿಂದ ವಿಮುಖರಾಗಿದ್ದು, ಪರಸ್ಪರ ವಾಗ್ದಾಳಿಯಲ್ಲಿ ತೊಡಗಿದ್ದಾರೆ. ಎದುರಾಳಿಯೇ ಶರಣಾಗಲಿ ಎಂದು ಪರಸ್ಪರ ಪಟ್ಟುಹಿಡಿದಿದ್ದಾರೆ. ಇಬ್ಬರಿಗೂ ಕೆಲ ದೇಶಗಳ ಬೆಂಬಲವಿದೆ.
ನಾಗರಿಕರು ಸೇರಿದಂತೆ ಮೃತರ ಸಂಖ್ಯೆ ಸೋಮವಾರ 97ಕ್ಕೆ ಏರಿದೆ. ಈ ಪೈಕಿ ಎಷ್ಟು ಮಂದಿ ಯೋಧರು ಸೇರಿದ್ದಾರೆ ಎಂಬುದು ದೃಢಪಟ್ಟಿಲ್ಲ. ಸೋಮವಾರ ಹಂಚಿಕೆಯಾಗಿರುವ ವಿಡಿಯೊವೊಂದರ ಪ್ರಕಾರ, ಒಂಡರ್ಮನ್ ನಗರದಲ್ಲಿ 12ಕ್ಕೂ ಹೆಚ್ಚು ಅರೆಸೇನಾ ಪಡೆ ಯೋಧರು ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಸಾಲಿನಲ್ಲಿ ಮಲಗಿ ಚಿಕಿತ್ಸೆ ಪಡೆಯುತ್ತಿರುವ ದೃಶ್ಯಗಳಿವೆ. ಆದರೆ, ಇದರ ವಿಶ್ವಾಸಾರ್ಹತೆ ಖಚಿತವಾಗಿಲ್ಲ.
ಕದನವಿರಾಮಕ್ಕೆ ಅಮೆರಿಕ ಒತ್ತಾಯ
ಈ ಮಧ್ಯೆ ಅಮೆರಿಕದ ವಿದೇಶಾಂಗ ಇಲಾಖೆಯ ಕಾರ್ಯದರ್ಶಿ ಆಯಂಟನಿ ಬ್ಲಿಂಕನ್ ಅವರು, 'ಕದನವಿರಾಮ ಘೋಷಿಸಬೇಕು ಹಾಗೂ ಜಪಾನ್‌ನಲ್ಲಿ ನಡೆಯಲಿರುವ ಏಳು ಶ್ರೀಮಂತ ರಾಷ್ಟ್ರಗಳ ಪ್ರತಿನಿಧಿಗಳ ಸಭೆಯಲ್ಲಿಯೇ ಸಂಧಾನ ಮಾತುಕತೆಗೆ ಬರಬೇಕು' ಎಂದು ಒತ್ತಾಯಿಸಿದ್ದಾರೆ.
'ಪ್ರಜಾಪ್ರಭುತ್ವ ಮರಳಿ ಅಸ್ತಿತ್ವಕ್ಕೆ ಬರಬೇಕು ಎಂದು ಸುಡಾನ್‌ನ ಜನ ಬಯಸುತ್ತಿದ್ದಾರೆ. ಜನರಿಂದಲೇ ಆಯ್ಕೆಯಾದ ಆಡಳಿತ ಅವರಿಗೆ ಬೇಕಾಗಿದೆ. ಸುಡಾನ್ ಆ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿದೆ' ಎಂದು ಹೇಳಿದರು.
ಸೇನೆ-ಅರೆಸೇನಾ ಪಡೆ
ಮುಖ್ಯಸ್ಥರು ಒಪ್ಪಂದಕ್ಕೆ ಸಿದ್ಧ?
ಅಂತರರಾಷ್ಟ್ರೀಯ ಸಮುದಾಯದ ಒತ್ತಡದ ಕಾರಣ ಸೇನೆ ಮತ್ತು ಅರೆಸೇನಾ ಪಡೆ ಮುಖ್ಯಸ್ಥರು ರಾಜಕೀಯ ಪಕ್ಷಗಳ ಜೊತೆಗೂಡಿ ಒಪ್ಪಂದ ಅಂತಿಮಗೊಳಿಸಲು ಒಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಆದರೆ, ಬಿಕ್ಕಟ್ಟಿನ ಮೂಲ ಬೇಡಿಕೆಯು ಹೇಗೆ ಇತ್ಯರ್ಥವಾಗಲಿದೆ ಎಂಬುದನ್ನು ಒಪ್ಪಂದ ಆಧರಿಸಿದೆ. ಸೇನೆಯಲ್ಲಿ ಅರೆಸೇನಾ ಪಡೆಯ ವಿಲೀನ ಹಾಗೂ ನಿಯಂತ್ರಣ ಯಾರಲ್ಲಿರಬೇಕು ಎಂಬುದು ಬಿಕ್ಕಟ್ಟಿನ ಮೂಲವಾಗಿದೆ.
ಬುರ‍್ಹಾನ್ ಮತ್ತು ಡಗಾಲೊ ನಡುವಿನ ಅಸಮಾಧಾನ, ಸೇನೆ ಮತ್ತು ಅರೆಸೇನಾ ಪಡೆ ನಡುವಿನ ವಿಷಮ ಸ್ಥಿತಿಯು ದಿನೇ ದಿನೇ ಹೆಚ್ಚುತ್ತಿದ್ದು, ಇದೇ ಕಾರಣದಿಂದ ಒಪ್ಪಂದ ಏರ್ಪಡುವುದು ವಿಳಂಬವಾಗುತ್ತಿದೆ.