ಕಾಸರಗೋಡು: ಕೇಂದ್ರ ಸರ್ಕಾರ ಕೇರಳಕ್ಕೆ ಕೊಡುಗೆಯಾಗಿ ನೀಡಿದ ವಂದೇ ಭಾರತ್ ಎಕ್ಸ್‍ಪ್ರೆಸ್ ರೈಲನ್ನು ಕಣ್ಣೂರಿನಿಂದ ಕಾಸರಗೋಡಿಗೆ ವಿಸ್ತರಿಸಿ ಕೇಂದ್ರ ಸರ್ಕಾರ ಆದೇಶ ಹೊರಡಿಸಿದ್ದು, ಬುಧವಾರ ಪರೀಕ್ಷಾರ್ಥ ಓಡಾಟದ ರೈಲು ಕಾಸರಗೋಡು ರೈಲ್ವೆ ನಿಲ್ದಾಣ ಬಂದು ಸೇರಿತು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಜನಸ್ತೋಮ ವಂದೇ ಭಾರತ್ ರೈಲಿಗೆ ಪುಷ್ಪಾರ್ಚನೆಗೈದು ಬರಮಾಡಿಕೊಂಡರು. ತಿರುವನಂತಪುರದಿಂದ ಬೆಳಗ್ಗೆ 5.20ಕ್ಕೆ ಹೊರಟಿದ್ದ ರೈಲು ಕಾಸರಗೋಡಿಗೆ ಮಧ್ಯಾಹ್ನ 1.10ಕ್ಕೆ ಬಂದು ತಲುಪಿದೆ. ಕಾಸರಗೋಡು ನಿಲ್ದಣಕ್ಕೆ ಆಗಮಿಸುತ್ತಿದ್ದಂತೆ ಚೆಂಡೆಮೇಳದೊಂದಿಗೆ ಅದ್ದೂರಿಯ ಸ್ವಾಗತ ನೀಡಲಾಯಿತು. ನೂರಾರು ಸಂಖ್ಯೆಯಲ್ಲಿ ಬಿಜೆಪಿ, ಕಾಂಗ್ರೆಸ್ ಕಾರ್ಯಕರ್ತರು ನಿಲ್ದಾಣದಲ್ಲಿ ಸೇರಿದ್ದರು.
ವಂದೇಭಾರತ್ ರೈಲನ್ನು ಸ್ವಾಗತಿಸುವ ಕಾರ್ಯಕ್ರಮವನ್ನು ಬಿಜೆಪಿ ಉತ್ಸವವಾಗಿ ಆಚರಿಸಿತ್ತು. ನಿಲ್ದಾಣದಲ್ಲಿ ನೆರೆದಿದ್ದವರಿಗೆ ಸಿಹಿ ತಿನಿಸು ವಿತರಿಸಿದರು. ಬಿಜೆಪಿ ಜಿಲ್ಲಾಧ್ಯಕ್ಷ ಕುಂಟಾರು ರವೀಶ ತಂತ್ರಿ, ರಜ್ಯ ಸಮಿತಿ ಕಾರ್ಯದರ್ಶಿ,ವಕೀಲ ಕೆ. ಶ್ರೀಕಾಂತ್, ಎ.ವೇಲಾಯುಧನ್, ಪ್ರಮಿಳಾ ಸಿ, ನಾಯ್ಕ್, ಸವಿತಾ ಟೀಚರ್, ದನಂಜಯ ಮಧೂರು ಸೇರಿದಂತೆ ಹಲವು ಮಂದಿ ಮುಖಂಡರು ಉಪಸ್ಥಿತರಿದ್ದರು. ಭಾರಿ ಸಂಖ್ಯೆಯಲ್ಲಿ ಸೇರಿದ್ದ ಬಿಜೆಪಿ ಕಾರ್ಯಕರ್ತರು ರೈಲಿಗೆ ಪುಷ್ಪವೃಷ್ಟಿ ನಡೆಸಿ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿಗೆ ಜೈಕಾರ ಹಾಕಿದರು. ರೈಲು ಬಂದು ನಿಲ್ಲುತ್ತಿದ್ದಂತೆ ರೈಲಿನ ಸಿಬ್ಬಂದಿ ಹಾಗೂ ಅಧಿಕಾರಿಗಳುನ್ನು ಹಾರಾರ್ಪಣೆಯೊಂದಿಗೆ ಸ್ವಾಗತಿಸಲಾಯಿತು. ಹಿಂದುಳಿದ ಕಾಸರಗೋಡಿಗೆ ಸವಲತ್ತು ನೀಡುವಲ್ಲಿ ಕೇಂದ್ರ ಸರ್ಕಾರ ಯಾವುದೇ ತಾರತಮ್ಯ ನಡೆಸದು ಎಂಬುದನ್ನು ನರೇಂದ್ರ ಮೋದಿ ಸರ್ಕಾರ ಸಾಬೀತುಪಡಿಸಿರುವುದಾಗಿ ಕುಂಟಾರು ರವೀಶ ತಂತ್ರಿ ತಿಳಿಸಿದ್ದಾರೆ.
ಐಕ್ಯರಂಗದಿಂದ ಸ್ವಾಗತ:
ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್, ಶಾಸಕರಾದ ಎನ್.ಎ ನೆಲ್ಲಿಕುನ್ನು, ಎ.ಕೆ.ಎಂ ಅಶ್ರಫ್, ಡಿಸಿಸಿ ಅಧ್ಯಕ್ಷ ಪಿ.ಕೆ ಫೈಸಲ್, ಮಾಜಿ ಅಧ್ಯಕ್ಷ ಹಾಕಿಂ ಕುನ್ನಿಲ್, ಕೆ. ನೀಲಕಂಠನ್, ಮನಾಫ್ ನುಳ್ಳಿಪ್ಪಾಡಿ, ಮುಸ್ಲಿಂಲೀಗ್, ಯೂತ್ ಲೀಗ್ ಮುಖಂಡರು ರೈಲ್ವೆ ನಿಲ್ದಾಣದಲ್ಲಿ ರೈಲಿಗೆ ಸ್ವಾಗತ ನೀಡಿದರು. ಈ ಸಂದರ್ಭ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಮಾತನಾಡಿ, ಕೇರಳಕ್ಕೆ ಮಂಜೂರುಗೊಳಿಸಿರುವ ವಂದೇಭಾರತ್ ರೈಲು ಗಾಡಿಯನ್ನು ಕಾಸರಗೋಡು ಮಾತ್ರವಲ್ಲ ಮಂಗಳೂರಿನ ವರೆಗೂ ವಿಸ್ತರಿಸುವಂತೆ ಮನವಿ ಮಾಡಿದ್ದೇನೆ. ತಿರುವನಂತಪುರದಿಂದ ಕಣ್ಣೂರು ವರೆಗೆ ಸೀಮಿತಗೊಳಿಸಿದಾಗ ಇದರ ವಿರುದ್ಧ ಕೇಂದ್ರ ರೈಲ್ವೆ ಸಚಿವಾಲಯ ಹಾಗೂ ವಿಭಾಗೀಯ ರೈಲ್ವೆ ಅಧಿಕಾರಿಗಳನ್ನು ಪತ್ರದ ಮೂಲಕ ಒತ್ತಾಯಿಸಿ ಕಾಸರಗೋಡಿಗೆ ವಿಸ್ತರಿಸುವಂತೆ ಕೇಳಿಕೊಂಡಿದ್ದೇನೆ. ವಂದೇಭಾರತ್ ರೈಲು ಮಂಜೂರುಗೊಳಿಸುವ ಸಂದರ್ಭ ಕೇರಳದ ಸಂಸದರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳದೆ ಒಕ್ಕೂಟ ವ್ಯವಸ್ಥೆಗೆ ಕೇಂದ್ರದ ನರೇಂದ್ರ ಮೋದಿ ಸರ್ಕಾರ ಧಕ್ಕೆಯುಂಟುಮಾಡಿರುವುದಾಗಿ ಆರೋಪಿಸಿದರು.
ಘೋಷಣೆಗೆ ಪೈಪೋಟಿ:
ಬಿಜೆಪಿ ಕಾರ್ಯಕರ್ತರು ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜೈಕಾರ ಹಾಕುತ್ತಿದ್ದರೆ, ಇನ್ನೊಂದೆಡೆ ಸಂಸದ ರಾಜ್‍ಮೋಹನ್ ಉಣ್ಣಿತ್ತಾನ್ ಅವರ ಭಾವಚಿತ್ರಗಳನ್ನು ಹಿಡಿದ ಐಕ್ಯರಂಗ ಕಾರ್ಯಕರ್ತರು ಉಣ್ಣಿತ್ತಾನ್ ಅವರಿಗೆ ಜೈಕಾರ ಘೋಷಣೆ ಹಾಕಿದರು. ನಿಲ್ದಾಣದಲ್ಲಿ ಉಭಯ ಪಕ್ಷಗಳ ಕಾರ್ಯಕರ್ತರು ಘೋಷಣೆ, ಕರತಾಡನದೊಂದಿಗೆ ರೈಲನ್ನು ಬರಮಾಡಿಕೊಂಡರು. ವ್ಯಾಪಾರಿ ವ್ಯವಸಾಯಿ ಏಕೋಪನಾ ಸಮಿತಿ ಕಾಸರಗೋಡು ಜಿಲ್ಲಾಘಟಕ ಪದಾಧಿಕಾರಿಗಳು ವಂದೇಭಾರತ್ ರೈಲಿಗೆ ಸ್ವಾಗತ ನೀಡಿದರು. ವಂದೇಭಾರತ್ ರೈಲು ಸೇವೆಗೆ ಏ. 25ರಂದು ಪ್ರಧಾನಿ ನರೇಂದ್ರ ಮೋದಿ ತಿರುವನಂತಪುರದಲ್ಲಿ ಔಪಚಾರಿಕ ಚಾಲನೆ ನೀಡುವರು.