ಜಮ್ಮು ಕಾಶ್ಮೀರ : ಇಲ್ಲಿನ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯಲ್ಲಿ(ಬಿಸಿಎಲ್) ಶನಿವಾರ ತಡರಾತ್ರಿ ಶಂಕಿತ ಭಯೋತ್ಪಾದಕರ ಒಳನುಸುಳುವ ಪ್ರಯತ್ನವನ್ನು ವಿಫಲಗೊಳಿಸಿರುವ ಸೇನಾಪಡೆ, ಮೂವರು ಪಾಕಿಸ್ತಾನಿ ಒಳನುಸುಕೋರರ ಪೈಕಿ ಒರ್ವನನ್ನು ಗುಂಡಿಕ್ಕಿ ಹತ್ಯೆಗೈದಿದೆ.
ಗಡಿ ನಿಯಂತ್ರಣ ರೇಖೆಯ ಶಾಹಪುರ್ ಸೆಕ್ಟರ್ ಬಳಿ ಒಳನುಸುಳುವಿಕೆ ಪ್ರಯತ್ನ ನಡೆದಿದೆ. ಶನಿವಾರ ರಾತ್ರಿ 2.15 ವೇಳೆ ಮೂವರು ಶಂಕಿತ ಭಯೋತ್ಪಾದಕರು ಒಳನುಸುಳುವಿಕೆ ಪ್ರಯತ್ನ ಮಾಡಿದ್ದರು. ಈ ಪ್ರಯತ್ನವನ್ನು ಸೇನಾಪಡೆ ವಿಫಲಗೊಳಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
'ತಡರಾತ್ರಿ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಅನುಮಾನಸ್ಪದ ಚಲನವಲಗಳು ಕಂಡುಬಂದಿದ್ದು, ಶಂಕಿತ ಉಗ್ರರರು ಒಳನುಸುಳುವ ಪ್ರಯತ್ನ ಮಾಡಿದ್ದರು.ತಕ್ಷಣ ಕಾರ್ಯಪ್ರವೃತ್ತರಾದ ಸೇನಾಪಡೆ ಗುಂಡಿನ ದಾಳಿ ನಡೆಸಿದೆ' ಎಂದು ಸೇನಾ ಪಿಆರ್‌ಓ ಲೆಫ್ಟಿನೆಂಟ್ ಕರ್ನಲ್ ದೇವೇಂದ್ರ ಆನಂದ್ ತಿಳಿಸಿದ್ದಾರೆ.
'ಸೇನಾಪಡೆ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು, ಒರ್ವ ನುಸುಳುಕೋರ ಗುಂಡಿಗೆ ಬಲಿಯಾಗಿರುವುದು ತಿಳಿದುಬಂದಿದೆ. ಉಳಿದ ಶಂಕಿತ ಉಗ್ರರು ಅರಣ್ಯದೊಳಗೆ ಪಲಾಯನ ಮಾಡಿರಬಹುದೆಂದು ಶಂಕಿಸಲಾಗಿದೆ. ಶೋಧ ಕಾರ್ಯ ಮುಂದುವರಿದಿದೆ' ಎಂದು ಸೇನಾ ವಕ್ತಾರರು ತಿಳಿಸಿದ್ದಾರೆ.