ದಿಂಡೋರಿ : ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿಯಲ್ಲಿ ವಿವಾಹವಾಗಲು ಆಯ್ಕೆಯಾದ ವಧುಗಳಿಗೆ ಮದುವೆಗೆ ಮುಂಚೆ ಗರ್ಭಧಾರಣೆ ಪರೀಕ್ಷೆ ನಡೆಸಲಾಗಿದೆ ಎಂಬ ಹೊಸ ಆರೋಪ ಕೇಳಿ ಬಂದಿದ್ದು, ಇದೀಗ ಮಧ್ಯಪ್ರದೇಶದಲ್ಲಿ ವಿವಾದ ಭುಗಿಲೆದ್ದಿದೆ.
ಈ ಬಗ್ಗೆ ಟ್ವೀಟ್ ಮಾಡಿರುವ ಮಾಜಿ ಮುಖ್ಯಮಂತ್ರಿ ಕಮಲನಾಥ್, ' ಸಿಎಂ ಕನ್ಯಾ ವಿವಾಹ ಯೋಜನೆಯಡಿ ದಿಂಡೋರಿ ಜಿಲ್ಲೆಯಲ್ಲಿ ನಡೆದ ಸಾಮೂಹಿಕ ವಿವಾಹದಲ್ಲಿ ಭಾಗವಹಿಸಿದ 200 ಮಹಿಳೆಯರಿಗೆ ಗರ್ಭಧಾರಣೆಯ ಪರೀಕ್ಷೆಗಳನ್ನು ನಡೆಸಲಾಗಿದೆ ಎಂದು ವರದಿಯಾಗಿದೆ. ಇದು ನಿಜವೇ ಎಂಬುದನ್ನು ನಾನು ಮುಖ್ಯಮಂತ್ರಿಯಿಂದ ತಿಳಿಯಬಯಸುತ್ತೇನೆ? ಇದು ನಿಜವಾಗಿದ್ದರೆ, ಯಾರ ಆಜ್ಞೆಯ ಮೇರೆಗೆ ಮಹಿಳೆಯರನ್ನು ಈ ರೀತಿಯ ಅವಮಾನಕ್ಕೆ ದೂಡಲಾಯಿತು? ಬಡ ಮತ್ತು ಬುಡಕಟ್ಟು ಸಮುದಾಯದ ಮಹಿಳೆಯರಿಗೆ ಗೌರವವಿಲ್ಲವೇ?' ಎಂದು ಕೇಳಿದ್ದಾರೆ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಉನ್ನತ ಮಟ್ಟದ ತನಿಖೆ ನಡೆದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.
'ಮಹಿಳೆಯರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಇಲ್ಲಿನ ಸಂಸದರು(ದಿಂಡೋರಿ ಸಂಸದ) ಎತ್ತಿದ ಕೈ. ಇದು ಕೇವಲ ಗರ್ಭಧಾರಣೆಯ ಪರೀಕ್ಷೆಗಳಿಗೆ ಸೀಮಿತವಾದ ಸಮಸ್ಯೆಯಲ್ಲ, ಮಹಿಳೆಯರ ಬಗೆಗಿನ ಸ್ತ್ರೀದ್ವೇಷದ ಮನೋಭಾವವನ್ನು ಇದು ಪ್ರತಿಬಿಂಬಿಸುತ್ತದೆ' ಎಂದು ಕಮಲನಾಥ್ ಹೇಳಿದ್ದಾರೆ.
'ನಾನು ಮದುವೆಗೆ ಎಲ್ಲ ರೀತಿಯ ತಯಾರಿ ನಡೆಸಿದ್ದೆ. ಆದರೆ, ಪಟ್ಟಿಯಲ್ಲಿ ನನ್ನ ಹೆಸರೇ ಇರಲಿಲ್ಲ. ನಾನು ಮದುವೆಯಾಗುವ ವ್ಯಕ್ತಿಯೊಡನೆ ವಾಸಿಸುತ್ತಿದ್ದೇನೆ. ವೈದ್ಯಕೀಯ ಪರೀಕ್ಷೆ ವೇಳೆ ನಾನು ಗರ್ಭಿಣಿಯಾಗಿರುವುದು ಕಂಡು ಬಂದಿದೆ. ಇದೇ ಕಾರಣಕ್ಕೆ ನನ್ನ ಹೆಸರನ್ನು ಪಟ್ಟಿಯಿಂದ ತೆಗೆದು ಹಾಕಲಾಗಿದೆ' ಎಂದು ಮುಖ್ಯಮಂತ್ರಿ ಕನ್ಯಾ ವಿವಾಹ ಯೋಜನೆಯಡಿ ಆಯ್ಕೆಯಾಗಿ ಕೊನೆಗೆ ತಿರಸ್ಕೃತರಾದ ವಧುವೊಬ್ಬರು ಸ್ಥಳೀಯ ಮಾಧ್ಯಮವೊಂದಕ್ಕೆ ಹೇಳಿರುವುದು ಈ ವಿವಾದಕ್ಕೆ ಇನ್ನಷ್ಟು ಪುಷ್ಟಿ ಕೊಟ್ಟಿದೆ.
ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಪ್ರಯೋಜವಾಗುವಂತೆ ಈ ಯೋಜನೆಯನ್ನು ತಂದಿದ್ದು, ಸಾಮೂಹಿಕ ವಿವಾಹವಾದ ದಂಪತಿಗಳಿಗೆ ನಗದು ಮತ್ತು ಗೃಹಬಳಕೆಯ ವಸ್ತುಗಳನ್ನು ನೀಡಲಾಗುತ್ತದೆ.