ಕಾಸರಗೋಡು: ಮೀನಮಾಸ ಕಾಲ ಬಂತೆಂದರೆ ಉತ್ತರ ಮಲಬಾರಿನಲ್ಲಿ ಪೂರಂ ಕಳಿಯ ಮಹೋತ್ಸವದ ಸಂಭ್ರಮ ಜನರನ್ನು ಹೆಚ್ಚು ಭಕ್ತಿಸಾಂಧ್ರತೆಯೊಂದಿಗೆ ಆಕರ್ಷಿಸುತ್ತದೆ. ಕಾಸರಗೋಡು ತಿಡಿಯನ್ ಕೊವ್ವಲ್ ಮುಂಡ್ಯ ದೇವಸ್ಥಾನದ ಮುಂಭಾಗದಲ್ಲಿ ಪೂರಂ ಉತ್ಸವ ನಡೆಯುವ ಬನಗಳಲ್ಲಿ (ಕಾವು) ಪೂರಂ ಹೂಗಳು ಅರಳಿ ನಿಂತಾಗ ಕಣ್ಮನ ಸೆಳೆಯುವ ದೃಶ್ಯ ಚೇತೋಹಾರಿ.
ವಿಸ್ತಾರವಾದ ರೀತಿಯಲ್ಲಿ ಬೆಳೆದಿರುವ ನಾರಾಯಣ ಪೂವಳ್ಳಿ(ಹೂವಿನ ಬಳ್ಳಿ ಚಪ್ಪರ) ಚಪ್ಪರ ಪೂರೋತ್ಸವದಲ್ಲಿ ಗಮನ ಸೆಳೆಯುವ ವಿಸ್ಮಯಕಾರಿ ದೃಶ್ಯವಾಗಿದೆ. ಹೂವಿನ ಚಪ್ಪರ ಸೂರ್ಯನ ಶಾಖದಿಂದ ನೆರಳು ಮತ್ತು ಕಣ್ಣಿಗೆ ತಂಪು ನೀಡುತ್ತದೆ. ಜೊತೆಗೆ ಆರೋಗ್ಯಕಾರ ಪ್ರಯೋಜನಗಳೂ ಇದರ ಹಿಂದಿದೆ.
ಉರಿಯುವ ಕುಂಭ ದೀಪ ಮತ್ತು ಅರಳಿರುವ ಹೂವುಗಳು ಹಬ್ಬದ ಪ್ರಮುಖ ಲಕ್ಷಣವಾಗಿದೆ. ಪೂರೋತ್ಸವಕ್ಕೆ ಪುಷ್ಪಗಳಲ್ಲಿ ನಾರಾಯಣ ಹೂವೆಂದು ಕರೆಸುವ ವಿಶೇಷ ಪ್ರಭೇದದ ಹೂವೇ ಮುಖ್ಯ. ನಾರಾಯಣ ಹೂವಿನ ಎಲೆಗಳನ್ನು ಆಯುರ್ವೇದ ಔಷಧವಾಗಿಯೂ ಬಳಸಲಾಗುತ್ತದೆ.
ಹೆಣ್ಮಕ್ಕಳು ಮನೆಗಳಲ್ಲಿ ಹೂವುಗಳನ್ನು ಆಯ್ದು ದೇವಾಲಯಗಳಿಗೆ ಕೊಂಡೊಯ್ದು ಆಚಾರಸ್ತಾನಿಕರ ಮೂಲಕ ಅಲಂಕರಿಸುತ್ತಾರೆ. ನಾರಾಯಣ ಪುಷ್ಪ ಅಲ್ಲದೆ, ಮಲ್ಲಿಗೆ, ಸಂಪಿಗೆ, ಇತರ ಸ್ಥಳೀಯ ಕಾಡುಹೂಗಳನ್ನೂ ಬಳಸಲಾಗುತ್ತದೆ. ಉತ್ಸವದ ಮುಖ್ಯ ಭಾಗವೆಂದರೆ ಕಾಮದೇವನ ಆರಾಧನೆ. ಋತುಮತಿಯಾಗದ ಹುಡುಗಿಯರು ಪೂರಂ ದಿನದಂದು ಸಂಜೆ ವೃತ ಕೈಗೊಂಡು ಹೂವುಗಳಿಂದ ಮಾಡಿದ ಕಾಮದೇವನನ್ನು ಆರಾಧಿಸಬೇಕೆಂಬುದು ನಂಬಿಕೆ.
ದೇವಾಲಯಗಳಲ್ಲಿ ಪೂರಂಕಳಿಯೊಂದಿಗೆ ಪೂರೋತ್ಸವ ಸಮಾಪನಗೊಳ್ಳುತ್ತದೆ. ಉತ್ಸವದ ಅಂಗವಾಗಿ ನಡೆಯುವ ಪೂರಕ್ಕಳಿ ಮತ್ತು ಮರಾಠಕ್ಕಳಿಗಾಗಿ ದೇವಾಲಯಗಳಲ್ಲಿ ನಾರಾಯಣ ಪುಷ್ಪದ ಚಪ್ಪರ ನಿರ್ಮಿಸುವುದು ವಿಶೇಷವಾಗಿದೆ.
ಉತ್ತರ ಮಲಬಾರಿನಲ್ಲಿ ಇನ್ನು ಪೂರಂ ಋತು: ಗಮನ ಸೆಳೆಯುವ ನಾರಾಯಣ ಹೂವಿನ ಚಪ್ಪರ
0
ಏಪ್ರಿಲ್ 02, 2023