ನ್ಯೂಯಾರ್ಕ್: ಅಫ್ಘಾನಿಸ್ತಾನದಲ್ಲಿ ಜಾಗತಿಕ ನೆರವಿನ ಸಂಘಟನೆಗಳ ಪರವಾಗಿ ಮಹಿಳೆಯರಿಗೆ ಕೆಲಸ ಮಾಡಲು ಅವಕಾಶ ಸಿಗದಿದ್ದರೆ ಮೇ ತಿಂಗಳಿನಿಂದ ಆ ದೇಶದಿಂದ ಹಿಂದೆ ಸರಿಯಲು ತಾನು ಸಿದ್ಧವಿದ್ದೇನೆ ಎಂದು ವಿಶ್ವಸಂಸ್ಥೆ ಸ್ಪಷ್ಟಪಡಿಸಿದೆ.
ಅಫ್ಘಾನಿಸ್ತಾನದಲ್ಲಿ ಮಾನವೀಯ ನೆರವಿನ ವಿತರಣೆಯಲ್ಲಿ ನಿರತರಾಗಿರುವ ಅಂತರಾಷ್ಟ್ರೀಯ ಸಂಘಟನೆಗಳ ಜತೆ ಕೆಲಸ ಮಾಡದಂತೆ ತಾಲಿಬಾನ್ ಆಡಳಿತ ಮಹಿಳೆಯರನ್ನು ನಿರ್ಬಂಧಿಸಿತ್ತು.
ನಿರ್ಬಂಧ ತೆರವುಗೊಳಿಸದಿದ್ದರೆ ಅಫ್ಘಾನ್ನಲ್ಲಿ ಮಾನವೀಯ ನೆರವನ್ನು ಅಗತ್ಯಬಿದ್ದವರಿಗೆ ತಲುಪಿಸುವುದು ಕಷ್ಟಸಾಧ್ಯ ಎಂದು ವಿಶ್ವಸಂಸ್ಥೆ ಹೇಳಿದೆ.
ಮಹಿಳೆಯರು ಕೆಲಸ ಮಾಡುವುದಕ್ಕೆ ನಿರ್ಬರ್ಂಧವಿದ್ದರೂ ನಾವಿಲ್ಲಿ ಕೆಲಸ ಮುಂದುವರಿಸಿದರೆ ಅದು ವಿಶ್ವಸಂಸ್ಥೆಯ ವ್ಯವಸ್ಥೆಗೆ ವಿರುದ್ಧವಾಗಿದೆ. ಆದರೆ ಮೂಲಭೂತ ನಿಯಮದ ವಿಷಯದಲ್ಲಿ ರಾಜಿ ಮಾಡಿಕೊಳ್ಳುವುದು ಸಾಧ್ಯವಿಲ್ಲ ಎಂದು ವಿಶ್ವಸಂಸ್ಥೆ ಅಭಿವೃದ್ಧಿ ಯೋಜನೆ(ಯುಎನ್ಡಿಪಿ) ಮುಖ್ಯಸ್ಥ ಅಚಿನ್ ಸ್ಟೈನರ್ ಹೇಳಿದ್ದಾರೆ.
ಅಫ್ಘಾನ್ನ ಪೂರ್ವದ ನಂಗರ್ಹರ್ ಪ್ರಾಂತದಲ್ಲಿ ವಿಶ್ವಸಂಸ್ಥೆಯ ನಿಯೋಗದಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆಯರು ಕೆಲಸಕ್ಕೆ ಹಾಜರಾಗದಂತೆ ತಾಲಿಬಾನ್ ನಿರ್ಬಂಧಿಸಿತ್ತು. ಇದರಿಂದ ಜೀವರಕ್ಷಕ ಮತ್ತು ಅಗತ್ಯದ ನೆರವನ್ನು ಅಲ್ಲಿನ ಜನತೆಗೆ ತಲುಪಿಸಲು ಸಾಧ್ಯವಾಗುತ್ತಿಲ್ಲ ಎಂದು ವಿಶ್ವಸಂಸ್ಥೆ ಇತ್ತೀಚೆಗೆ ಕಳವಳ ವ್ಯಕ್ತಪಡಿಸಿತ್ತು.