ಬೇಸಿಗೆಯಲ್ಲಿ ತಣ್ಣನೆಯ ಐಸ್‌ಕ್ರೀಮ್ ಸವಿಯಲು ಯಾರಿಗೆ ತಾನೆ ಇಷ್ಟವಾಗಲ್ಲ ಹೇಳಿ....ಅದರಲ್ಲೂ ಮಕ್ಕಳಂತೂ ಐಸ್‌ಕ್ರೀಂ ಕಂಡರೆ ಕೊಡಿಸುವವರೆಗೆ ಮುಷ್ಕರ ಮಾಡುತ್ತಾರೆ. ಹೊರಗಡೆ ಐಸ್‌ಕ್ರೀಂ ಕೊಡಿಸೋಕೆ ಪೋಷಕರು ರೆಡಿಯಿರಲ್ಲ. ಈ ಐಸ್‌ಕ್ರೀಂ ಎಲ್ಲಾ ತಿಂದರೆ ಹುಷಾರಿರಲ್ಲ, ಬೇಡ ಅಂತಾರೆ, ಆದರೆ ಮಕ್ಕಳು ಕೇಳಬೇಕಲ್ಲ. ನೀವು ಆರೋಗ್ಯಕರ ಐಸ್‌ಕ್ರೀಂ ಮನೆಯಲ್ಲಿಯೇ ಮಾಡಿದರೆ ಬೆಸ್ಟ್ ಅಲ್ವಾ? ಹೌದು ಮನೆಯಲ್ಲಿಯೇ ಐಸ್‌ಕ್ರೀಮ್ ಮಾಡುವುದು ಹೇಗೆ ಎಂದು ನೋಡೋಣ ಬನ್ನಿ:
ಎಳನೀರಿನ ಐಸ್‌ಕ್ರೀಂ ರೆಸಿಪಿ
ಎಳನೀರಿನ ಐಸ್‌ಕ್ರೀಮ್
ಬೇಸಿಗೆಗೆ ಎಳನೀರು ತುಂಬಾನೇ ಒಳ್ಳೆಯದು, ಆದ್ದರಿಂದ ನೀವು ಎಳನೀರಿ ಐಸ್‌ಕ್ರೀಮ್ ತಯಾರಿಸಿದರೆ ಆರೋಗ್ಯಕ್ಕೂ ಒಳ್ಳೆಯದು.
ಬೇಕಾಗುವ ಸಾಮಗ್ರಿ
ಎಳನೀರಿನ ಗಂಜಿ ( ಸ್ವಲ್ಪ ದಪ್ಪ ಗಂಜಿ 2-3 ಎಳನೀರಿನ ಗಂಜಿ, ಒಂದು ಎಳನೀರು)
ನೀವು ಕುಡಿಯಲು ತಂದಾಗ ನೀರು ಕುಡಿದು, ಸ್ವಲ್ಪ ನೀರು ಇಟ್ಟು, ಗಂಜಿಯನ್ನುಐಸ್‌ಕ್ರೀಮ್ ಮಾಡಲು ಬಳಸಬಹುದು.
* ಜೋಳದ ಹಿಟ್ಟು 2 ಚಮಚ
* ಮುಕ್ಕಾಲು ಲೀಟರ್ ಹಾಲು
* ಒಂದು ಕಪ್ ಸಕ್ಕರೆ
ಮಾಡುವ ವಿಧಾನ:
* ಎಳನೀರಿನ ಗಂಜಿಯನ್ನುತೆಗೆದು ಮಿಕ್ಸಿಯಲ್ಲಿ ತಿರುಗಿಸಿ ಪೇಸ್ಟ್ ರೀತಿ ಮಾಡಿ. ರುಬ್ಬಲು ಸ್ವಲ್ಪವೇ ಸ್ವಲ್ಪ ಎಳನೀರು ಬಳಸಿ, ಗಂಜಿ ತೆಳುವಿದ್ದರೆ ಎಳನೀರಿನ ಅವಶ್ಯಕತೆಯಿಲ್ಲ
* ಹಾಲನ್ನು ಕುದಿಸಿ, ಹಾಲು ಕುದಿ ಬಂದ , ಉರಿ ಮೆಲ್ಲನೆ ಮಾಡಿ ಹಾಲು ಗಟ್ಟಿಯಾಗುವವರೆಗೆ ಕುದಿಸಿ. ಸಕ್ಕರೆ ಸೇರಿಸಿ, ಸಿಹಿ ಹೆಚ್ಚು ಬೇಕೆಂದರೆ ಇನ್ನೂ ಸ್ವಲ್ಪ ಹಾಕಬಹುದು. ಹಾಲು ಮಂದವಾದರೆ ರುಚಿ ಹೆಚ್ಚು.
* ನೀವು ಒಂದು ಚಿಕ್ಕ ಬೌಲ್‌ಗೆ ಹಾಲು ಹಾಕಿ ಅದರಲ್ಲಿ 2 ಚಮಚ ಜೋಳದ ಹಿಟ್ಟು ಹಾಕಿ ಗಂಟು ಕಟ್ಟದಂತೆ ಕರಗಿಸಬೇಕು.
* ಈಗ ಜೋಳದ ಮಿಶ್ರಣವನ್ನು ಹಾಲಿಗೆ ಹಾಕಿ ಗಂಟು ಆಗದಂತೆ ತಿರುಗಿಸುತ್ತಾ ಕಡಿಮೆ ಉರಿಯಲ್ಲಿ 5 ನಿಮಿಷ ಕುದಿಸಿ, ಹಾಲು ಮಂದವಾದ ಮೇಲೆ ಗ್ಯಾಸ್ ಆಫ್ ಮಾಡಿ, ಬಿಸಿ ಸ್ವಲ್ಪ ಕಡಿಮೆಯಾದ ಮೇಲೆ ರುಬ್ಬಿದ ಎಳನೀರಿನ ಪೇಸ್ಟ್ ಹಾಕಿ ಮಿಶ್ರಣ ಮಾಡಿ, ಮಿಶ್ರಣ ಇನ್ನಷ್ಟು ಮಂದವಾಗುವುದು. ಈಗ ಅದನ್ನು ಗಾಳಿಯಾಡದಂತೆ ಒಂದು ಪಾತ್ರೆಯಲ್ಲಿ ಹಾಕಿ, ನೀವು ಬೌಲ್‌ಗೆ ಹಾಕಿ ಅದರ ಮೇಲೆ ಸಿಲ್ವರ್‌ಫಾಯಿಲ್‌ನಿಂದ ಮುಚ್ಚಬಹುದು. ಈಗ ಈ ಮಿಶ್ರಣವನ್ನು ಡೀಪ್ ಫ್ರೀಝರ್‌ನಲ್ಲಿ 3 ಗಂಟೆ ಇಡಿ. ನಂತರ ತೆಗೆದು ಒಂದು ಎರಡು ನಿಮಿಷ ಹಾಗೇ ಬಿಟ್ಟು, ಮತ್ತೆ ಮಿಕ್ಸಿಯಲ್ಲಿ ಹಾಕಿ ತಿರುಗಿಸಿ, ಪಾತ್ರೆಗೆ ಹಾಕಿಟ್ಟು ಫ್ರಿಡ್ಜ್‌ನಲ್ಲಿ ಒಂದು ರಾತ್ರಿ ಇಡಿ.
ನಂತರ ತೆಗೆದು 2 ನಿಮಿಷ ಬಿಟ್ಟ ಮೇಲೆ ಬೌಲ್‌ಗೆ ಹಾಕಿ ಮಕ್ಕಳಿಗೆ ಸರ್ವ್ ಮಾಡಿ. ಇದರ ಮೇಲೆ ಸ್ವಲ್ಪ ಡ್ರೈ ಫ್ರೂಟ್ಸ್ ಹಾಕಿದರೆಮತ್ತಷ್ಟು ಆರೋಗ್ಯಕರ. ಲೆಟ್ಸ್ ಎಂಜಾಯ್....
- ಸಕ್ಕರೆಯನ್ನು ನಿಮ್ಮ ರುಚಿಗೆ ತಕ್ಕಷ್ಟು ಹಾಕಿ
ಎಳನೀರಿನ ಗಂಜಿನ ಪ್ರಯೋಜನಗಳು
* ಬೇಸಿಗೆಯ ಸೆಕೆಗೆ ತುಂಬಾನೇ ಒಳ್ಳೆಯದು
* ಇದು ಬೇಸಿಗೆಯಲ್ಲಿ ದೇಹವನ್ನು ತಂಪಾಗಿಸುತ್ತದೆ
* ಹೊಟ್ಟೆಯ ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು: ಇದರಲ್ಲಿ ಪ್ರೊಬಯೋಟಿಕ್ ಇರುವುದರಿಂದ ಹೊಟ್ಟೆಯ ಆರೋಗ್ಯವನ್ನು ವೃದ್ಧಿಸುತ್ತದೆ.
* ಉರಿಯೂತ ಕಡಿಮೆ ಮಾಡುತ್ತದೆ
* ಕೊಲೆಸ್ಟ್ರಾಲ್ ನಿಯಂತ್ರಣದಲ್ಲಿಡುತ್ತದೆ: ಇದರಲ್ಲಿರುವ ಪೋಷಕಾಂಶ ಕೊಲೆಸ್ಟ್ರಾಲ್ ಅನ್ನು ನಿಯಂತ್ರಣದಲ್ಲಿಡುತ್ತದೆ
ಹಾಲಿನ ಪ್ರಯೋಜನಗಳು * ಹಾಲಿನಲ್ಲಿ ಪೋಷಕಾಂಶಗಳು ಅಧಿಕವಿರಲಿದೆ. * ಇದರಲ್ಲಿ ಪ್ರೊಟೀನ್ ಅಧಿಕವಿರಲಿದೆ * ಹಾಲು ಮೂಳೆಯ ಆರೋಗ್ಯಕ್ಕೆ ಒಳ್ಳೆಯದು * ತೂಕ ನಿಯಂತ್ರಣಕ್ಕೆ ಸಹಕಾರಿ ನೀವು ಎಳನೀರಿನ ಐಸ್‌ಕ್ರೀಮ್ ತಿಂದರೆ ಈ ಎಲ್ಲಾ ಪ್ರಯೋಜನಗಳು ಸಿಗಲಿದೆ.