ನವದೆಹಲಿ: ಸಲಿಂಗ ವಿವಾಹವು 'ನಗರ ಗಣ್ಯರ ಸಂಸ್ಕೃತಿ' ಎಂದು ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ಹೇಳಿದೆ. ಅಲ್ಲದೇ ಮದುವೆಗೆ ಅಂಗೀಕಾರ ನೀಡುವುದು ಶಾಸಕಾಂಗದ ಕೆಲಸವಾಗಿದ್ದು, ಕೋರ್ಟ್ ಇದರಿಂದ ಹಿಂದೆ ಸರಿಯಬೇಕು ಎಂದು ಹೇಳಿದೆ.
ಸಲಿಂಗ ವಿವಾಹಕ್ಕೆ ಮಾನ್ಯತೆ ನೀಡಬೇಕು ಎಂದು ಸಲ್ಲಿಸಲಾಗಿರುವ ಹಲವು ಅರ್ಜಿಗಳ ಸಂಬಂಧ ಕೇಂದ್ರ ಸರ್ಕಾರವು ಸುಪ್ರೀಂ ಕೋರ್ಟ್‌ಗೆ ನೀಡಿದ ಅಫಿಡವಿಟ್‌ನಲ್ಲಿ ಹೀಗೆ ಹೇಳಿದೆ.
ಸಲಿಂಗ ವಿವಾಹವು, ಸಾಮಾಜಿಕ ಸ್ವೀಕಾರದ ಉದ್ದೇಶಕ್ಕಾಗಿ ಕೇವಲ ನಗರ ಗಣ್ಯರ ದೃಷ್ಟಿಕೋನವಾಗಿದೆ. ಸಮರ್ಥ ಶಾಸಕಾಂಗವು ಗ್ರಾಮೀಣ, ಅರೆನಗರ ಹಾಗೂ ನಗರವಾಸಿಗಳ ಅಭಿಪ್ರಾಯಗಳನ್ನು ಗಣನೆಗೆ ತೆಗೆದುಕೊಂಡು, ಧಾರ್ಮಿಕ ಪಂಗಡ, ವೈಯಕ್ತಿಕ ಕಾನೂನು, ವಿವಾಹ ಪದ್ಧತಿಗಳ ಜತೆಗೆ ಅದರ ಪರಿಣಾಮಗಳನ್ನು ಗಮನಿಸುತ್ತದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
ವಿವಾಹವು ಸಾಮಾಜಿಕ-ನ್ಯಾಯಿಕ ಆಚರಣೆಯಾಗಿದ್ದು, ಸಂವಿಧಾನದ 26ನೇ ವಿಧಿಯನ್ವಯ ಸ್ಥಾಪಿಸಲಾದ ಶಾಸನದಿಂದ ನಿಯಂತ್ರಿಸಲ್ಪಡುವುದಾಗಿದೆ. ಜತೆಗೆ ಕಾನೂನಿನ ಪಾವಿತ್ರ್ಯತೆಯಿಂದ ಗುರುತಿಸಿ ಅನುಗ್ರಹಿಸುವುದಾಗಿದೆ ಎಂದು ಕೇಂದ್ರ ಸರ್ಕಾರ ಅಭಿಪ್ರಾಯಪಟ್ಟಿದೆ.
ಅಲ್ಲದೇ ಅರ್ಜಿಯಲ್ಲಿ ಎತ್ತಿರುವ ಪ್ರಶ್ನೆಗಳನ್ನು ಜನಪ್ರತಿನಿಧಿಗಳ ವಿವೇಚನೆಗೆ ಬಿಡಬೇಕು ಎಂದು ಕೇಂದ್ರ ಸರ್ಕಾರವು ಅರ್ಜಿದಾರರಿಗೆ ಮನವಿ ಮಾಡಿದೆ.
ಮುಖ್ಯನ್ಯಾಯಮೂರ್ತಿ ಡಿ.ವೈ ಚಂದ್ರಚೂಡ್ ಅವರ ನೇತೃತ್ವದಲ್ಲಿ ನ್ಯಾಯಮೂರ್ತಿ ಎಸ್.ಕೆ ಕೌಲ್, ನ್ಯಾ. ಎಸ್. ರವೀಂದ್ರ ಭಟ್, ನ್ಯಾ. ಪಿ.ಎಸ್ ನರಸಿಂಹ ಹಾಗೂ ನ್ಯಾ. ಹಿಮಾ ಕೊಹ್ಲಿ ಅವರಿರುವ ಪೀಠ ಈ ಅರ್ಜಿಯ ವಿಚಾರಣೆ ನಡೆಸುತ್ತಿದೆ. ವಿಚಾರಣೆಯನ್ನು ಮಂಗಳವಾರಕ್ಕೆ ಮುಂದೂಡಲಾಗಿದೆ.