ಪೆರ್ಲ: ಎಣ್ಮಕಜೆ ಗ್ರಾಮ ಪಂಚಾಯತಿ ಬಿರ್ಮೂಲೆಯ ಅಕ್ಷಯ ಸಾರ್ವಜನಿಕ ಗ್ರಂಥಾಲಯದಲ್ಲಿ ರಂಗ ಡಿಂಡಿಮ ಕಲಾ ಸಂಸ್ಥೆ ಏರ್ಪಡಿಸಿದ ವರ್ಲಿ ಆರ್ಟ್ ರಚನಾ ಕಾರ್ಯಗಾರ ನೋಡುಗರನ್ನು ವಿಸ್ಮಯಗೊಳಿಸುವುದರ ಜತೆಗೆ ಹಲವಾರು ಮಂದಿಗೆ ಈ ಕಲೆಯನ್ನು ರಚಿಸುವ ಮಾಹಿತಿ ನೀಡಿತು.
ರಂಗ ಡಿಂಡಿಮ ಹಾಗೂ ಅಕ್ಷಯ ಗ್ರಂಥಾಲಯ ಜಂಟಿಯಾಗಿ ಏರ್ಪಡಿಸಿದ ಈ ವೈವಿಧ್ಯಮಯ ಕಾರ್ಯಗಾರದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಪ್ರಸಿದ್ಧ ಚಿತ್ರ ಕಲಾವಿದ ಶಿಕ್ಷಕ ತಾರಾನಾಥ ಕೈರಂಗಳ ಹಾಗೂ ಕಿರಣ್ ಕಲಾಂಜಲಿ ಮಹಾರಾಷ್ಟದ ಬುಡಕಟ್ಟು ಜನಾಂಗದ ವರ್ಲಿ ಕಲೆಯ ಬಗ್ಗೆ ಸವಿವರ ಮಾಹಿತಿ ಹಾಗೂ ಚಿತ್ರ ರಚನಾ ವಿಧದ ಬಗ್ಗೆ ತಿಳಿಸಿದರು. ಬಳಿಕ ಹಲವಾರು ವಿದ್ಯಾರ್ಥಿಗಳ ಸಹಿತ ಊರವರು ವರ್ಲಿ ಚಿತ್ರ ಕಲೆಯ ಮೂಲಕ ಗ್ರಂಥಾಲಯದ ಭಿತ್ತಿಯನ್ನು ಶೃಂಗಾರಗೊಳಿಸಿದರು. ಮೊತ್ತ ಮೊದಲ ಬಾರಿಗೆ ಕೇರಳ ರಾಜ್ಯ ಗ್ರಂಥಾಲಯದಲ್ಲಿ ಹೀಗೊಂದು ವರ್ಲಿ ಚಿತ್ರ ಕಲೆ ಆಯೋಜಿಸಿದರ ಬಗ್ಗೆ ಸಾರ್ವಜನಿಕರಿಂದ ಪ್ರಶಂಸನೆ ಮೂಡಿಬಂತು. ಕಾರ್ಯಗಾರದಲ್ಲಿ ಕಲಾವಿದರಾದ ಕೃಷ್ಣಪ್ಪ ಬಂಬಿಲ,ದೀಪ್ತಿ ಅಡ್ಡಂತ್ತಡ್ಕ, ಯತೀಶ್ ಕುಮಾರ್ ರೈ ಮುಳ್ಳೇರಿಯ, ಕೃಪಾಶ್ರೀ ಉಪ್ಪಳ, ಉದಯ ಸಾರಂಗ ಹಾಗೂ ಸದಾನಂದ ಬಿರ್ಮೂಲೆ ಮೊದಲಾದವರು ಪಾಲ್ಗೊಂಡು ಯಶಸ್ವಿಗೊಳಿಸಿದರು.