ತಿರುವನಂತಪುರ: ತನ್ನ ಮಾಜಿ ಪ್ರೇಯಸಿಗೆ ನಿಗದಿಯಾಗಿದ್ದ ವರನಿಗೆ ಮಾರ್ಫ್ ಮಾಡಿದ ಅಶ್ಲೀಲ ಫೋಟೋಗಳನ್ನು ಕಳುಹಿಸುವ ಮೂಲಕ ಮದುವೆ ನಿಲ್ಲಿಸಿದ ಆರೋಪದ ಮೇಲೆ ಯುವಕನೊಬ್ಬನನ್ನು ಕೇರಳ ಪೊಲೀಸರು ಬಂಧಿಸಿದ್ದಾರೆ.
ಬಂಧಿತನ್ನು 22 ವರ್ಷದ ಎಸ್.ವಿಜಿನ್ ಎಂದು ಗುರುತಿಸಲಾಗಿದೆ. ಈತ ಕಡುಕ್ಕಮೂಡುವಿನ ವೆಲ್ಲನಾಡು ಮೂಲದವನು.
ವಧು ಮತ್ತು ಆರೋಪಿ ಇಬ್ಬರು ನಾಲ್ಕು ವರ್ಷಗಳ ಕಾಲ ಪರಸ್ಪರ ಪ್ರೀತಿಸುತ್ತಿದ್ದರು. ಆದರೆ, ಕಾರಣಾಂತರಗಳಿಂದ ಇಬ್ಬರು ಬೇರೆಯಾದ ನಂತರ, ಯುವತಿಯ ಕುಟುಂಬವು ಇನ್ನೊಬ್ಬ ಯುವಕನೊಂದಿಗೆ ಅವಳ ಮದುವೆಯನ್ನು ನಿಗದಿಪಡಿಸಿತು.
ಮಾಜಿ ಪ್ರೇಯಸಿಗೆ ಮದುವೆ ನಿಶ್ವಯವಾದ್ದರಿಂದ ಅಸಮಾಧಾನಗೊಂಡಿದ್ದ ಮಾಜಿ ಪ್ರಿಯಕರ ತಮ್ಮ ಪ್ರೀತಿಯ ದಿನಗಳಲ್ಲಿ ತೆಗೆದಿದ್ದ ಫೋಟೋಗಳನ್ನು ಮಾರ್ಫ್ ಮಾಡಿ, ಆಕೆಗೆ ನಿಗದಿಯಾಗಿದ್ದ ವರನ ವಾಟ್ಸ್ಆಯಪ್ ನಂಬರ್ಗೆ ಕಳುಹಿಸಿದ್ದಾನೆ. ಅಲ್ಲದೆ, ವರನ ಮನೆಗೆ ತೆರಳಿ ಆತನ ಪಾಲಕರಿಗೂ ಫೋಟೋಗಳನ್ನು ತೋರಿಸಿದ್ದಾನೆ. ಇದಾದ ಬಳಿಕ ಇಬ್ಬರ ಮದುವೆ ಮುರಿಬಿದ್ದಿದೆ.
ಯುವತಿ ಕುಟುಂಬ ನೀಡಿದ ದೂರಿನ ಆಧಾರದ ಮೇಲೆ ಐಟಿ ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ವಿಜಿನ್‌ನನ್ನು ಪೊಲೀಸರು ಬಂಧಿಸಿದ್ದಾರೆ. ಮಾಜಿ ಪ್ರೇಯಸಿಯ ಮದುವೆ ನಿಲ್ಲಿಸಲು ಈ ರೀತಿ ಮಾಡಿದ್ದಾಗಿ ಪೊಲೀಸರಿಗೆ ತಿಳಿಸಿದ್ದಾನೆ. ವಿಜಿನ್ ಫೋನ್ ಅನ್ನು ವಿಧಿವಿಜ್ಞಾನ ಪರೀಕ್ಷೆಗೆ ಕಳುಹಿಸುವುದಾಗಿ ಪೊಲೀಸರು ತಿಳಿಸಿದ್ದಾರೆ.
ವಿಜಿನ್‌ನನ್ನು ವಿಲಪ್ಪಿಲಸಾಲ ಇನ್ಸ್‌ಪೆಕ್ಟರ್ ಎನ್. ಸುರೇಶ್ ಕುಮಾರ್ ನೇತೃತ್ವದ ತಂಡವು ಬಂಧಿಸಿದೆ.