ಪ್ರಯಾಗ್‌ರಾಜ್ : ಪಾತಕಿ, ಮಾಜಿ ಸಂಸದ ಅತೀಕ್ ಅಹಮದ್ ಹಾಗೂ ಆತನ ತಮ್ಮ ಅಶ್ರಫ್ ಅವರ ಹತ್ಯೆ ನಡೆದಿದ್ದ ಸ್ಥಳದಲ್ಲಿ ಉತ್ತರ ಪ್ರದೇಶ ಪೊಲೀಸರು ಗುರುವಾರ ಅಪರಾಧ ದೃಶ್ಯ ಮರು ಸೃಷ್ಟಿಸಿದ್ದಾರೆ.
ಇದೇ ತಿಂಗಳ 15ರಂದು ರಾತ್ರಿ ಪ್ರಯಾಗ್‌ರಾಜ್ ಆಸ್ಪತ್ರೆಯ ಹೊರ ಭಾಗದಲ್ಲಿ ಹತ್ಯೆ ನಡೆದಿತ್ತು.
ಈ ಸ್ಥಳಕ್ಕೆ ಭೇಟಿ ನೀಡಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಹಾಗೂ ವಿಧಿವಿಜ್ಞಾನ ಪ್ರಯೋಗಾಲಯ ತಂಡದ ಅಧಿಕಾರಿಗಳು, ಹತ್ಯೆ ನಡೆದಿದ್ದು ಹೇಗೆ ಎಂಬುದರ ಕುರಿತು ಮಾಹಿತಿ ಕಲೆಹಾಕಿದ್ದಾರೆ.
ಮಧ್ಯಾಹ್ನ 1.30ರ ಸುಮಾರಿಗೆ ಕಾಲ್ವಿನ್ ಆಸ್ಪತ್ರೆಯ ಹೊರ ಭಾಗದಲ್ಲಿರುವ ಸ್ಥಳಕ್ಕೆ ಭೇಟಿ ನೀಡಿದ್ದ ತನಿಖಾ ತಂಡದ ಸದಸ್ಯರು ಹತ್ಯೆಯ ವೇಳೆ ಅತೀಕ್ ಹಾಗೂ ಅಶ್ರಫ್ ಅವರ ಜೊತೆ ಇದ್ದ ಪೊಲೀಸ್ ಸಿಬ್ಬಂದಿಯನ್ನೂ ಸ್ಥಳಕ್ಕೆ ಕರೆಸಿಕೊಂಡಿದ್ದರು. ಅಪರಾಧ ದೃಶ್ಯದ ಮರುಸೃಷ್ಟಿ ವೇಳೆ ಘಟನಾ ಸ್ಥಳದ ಸುತ್ತಲೂ ಬಿಗಿ ಪೊಲೀಸ್ ಬಂದೋಬಸ್ತ್ ಕೈಗೊಳ್ಳಲಾಗಿತ್ತು. ಈ ವೇಳೆ ಎಡಿಜಿ ಭಾನು ಭಾಸ್ಕರ್, ಪೊಲೀಸ್ ಕಮಿಷನರ್ ರಮಿತ್ ಶರ್ಮಾ ಮತ್ತು ಜಂಟಿ ಕಮಿಷನರ್ ಆಕಾಶ್ ಕುಲ್ಹಾರಿ ಅವರೂ ಸ್ಥಳದಲ್ಲಿ ಹಾಜರಿದ್ದರು.
'ಅಪರಾಧ ದೃಶ್ಯದ ಮರುಸೃಷ್ಟಿಯಿಂದಾಗಿ ಒಂದಷ್ಟು ಸುಳಿವುಗಳು ಲಭ್ಯವಾಗಲಿವೆ. ಇದರ ಆಧಾರದಲ್ಲಿ ತನಿಖಾ ತಂಡದವರು ಆರೋಪಿಗಳನ್ನು ವಿಚಾರಣೆಗೊಳಪಡಿಸಬಹುದು' ಎಂದು ಪೊಲೀಸರು ಹೇಳಿದ್ದಾರೆ.
ಅತೀಕ್ ಗುಂಪಿನ ಸದಸ್ಯ ಬಂಧನ: ಅತೀಕ್ ಅಹಮದ್ ಗುಂಪಿಗೆ ಸೇರಿರುವ ಪಾತಕಿಯೊಬ್ಬನನ್ನು ಬಂಧಿಸಿರುವುದಾಗಿ ಪೊಲೀಸರು ಗುರುವಾರ ಹೇಳಿದ್ದಾರೆ.
'ನ್ಯೂ ಚಾಕಿಯಾ ನಿವಾಸಿ ಅಸದ್ ಕಾಲಿಯಾ ಬಂಧಿತ. ಕರೇಲಿ ಪೊಲೀಸ್ ಠಾಣೆಯ ಸಿಬ್ಬಂದಿ ಬುಧವಾರ ಈತನನ್ನು ಬಂಧಿಸಿದ್ದಾರೆ' ಎಂದು ಪ್ರಕಟಣೆ ತಿಳಿಸಿದೆ.
'ಕಾಲಿಯಾ, ಅತೀಕ್ ಪತ್ನಿ ಶಾಯಿಸ್ತಾ ಪರ್ವೀನ್ ಅವರ ಬಲಗೈ ಬಂಟ ಎಂದೇ ಗುರುತಿಸಿಕೊಂಡಿದ್ದ. ಉಮೇಶ್ ಪಾಲ್ ಹತ್ಯೆ ಪ್ರಕರಣದಲ್ಲಿ ಪೊಲೀಸರಿಗೆ ಬೇಕಾಗಿದ್ದ ಈತ ಹಲವು ದಿನಗಳಿಂದ ತಲೆಮರೆಸಿಕೊಂಡಿದ್ದ. ಕರೇಲಿ ಪೊಲೀಸ್ ಠಾಣೆಯಲ್ಲಿ ಈತನ ವಿರುದ್ಧ ಕೊಲೆ ಯತ್ನ ಸೇರಿದಂತೆ ಹಲವು ಗಂಭೀರ ಪ್ರಕರಣಗಳು ದಾಖಲಾಗಿದ್ದವು. ಈತನ ಸುಳಿವು ನೀಡಿದವರಿಗೆ ₹50 ಸಾವಿರ ಬಹುಮಾನ ಘೋಷಿಸಲಾಗಿತ್ತು' ಎಂದು ಹೇಳಿದೆ.