ತಿರುವನಂತಪುರ:ತಿರುವನಂತಪುರ ಹಾಗೂ ಕಾಸರಗೋಡು ನಡುವೆ ಸಂಚರಿಸಲಿರುವ ವಂದೆ ಭಾರತ್ ಎಕ್ಸ್‌ಪ್ರೆಸ್ ಸೇವೆಯನ್ನು ಬರುವ ದಿನಗಳಲ್ಲಿ ಮಂಗಳೂರು ವರೆಗೆ ವಿಸ್ತರಿಸುವ ಸಾಧ್ಯತೆ ಇದೆ. ವಂದೆ ಭಾರತ್ ಎಕ್ಸ್‌ಪ್ರೆಸ್‌ಗೆ ಹಸಿರು ನಿಶಾನೆ ತೋರಿದ ನಂತರ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ 'ತಿರುವನಂತಪುರ- ಶೋರ್ನೂರು ನಡುವಿನ ರೈಲು ಮಾರ್ಗ ನಿರ್ಮಾಣ ಕಾಮಗಾರಿ ಸಂಪೂರ್ಣಗೊಂಡ ನಂತರ ವಂದೆ ಭಾರತ್ ಎಕ್ಸ್‌ಪ್ರೆಸ್ ಸಂಚಾರವನ್ನು ಮಂಗಳೂರು ವರೆಗೆ ವಿಸ್ತರಣೆ ಮಾಡಬಹುದಾಗಿದೆ' ಎಂದರು.
'ಕೇರಳದಲ್ಲಿರುವ ಸಿಗ್ನಲ್ ವ್ಯವಸ್ಥೆಗಳಲ್ಲಿ ಸುಧಾರಣೆ ತರುವುದು ರೈಲು ಮಾರ್ಗಗಳಲ್ಲಿನ ತಿರುವುಗಳನ್ನು ತೆಗೆದು ಹಾಕಿದಾಗ ವಂದೆ ಭಾರತ್ ಎಕ್ಸ್‌ಪ್ರೆಸ್ ರೈಲು ಓಡಲು ಸಾಧ್ಯವಾಗಲಿದೆ. ಆಗ ತಿರುವನಂತಪುರ-ಮಂಗಳೂರು ನಡುವಿನ ಪ್ರಯಾಣ ಅವಧಿ ಸದ್ಯದ ಎಂಟು ಗಂಟೆಯಿಂದ ಆರು ಗಂಟೆಗೆ ಇಳಿಯಲಿದೆ' ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಹೇಳಿದರು. 'ಕೇರಳದಲ್ಲಿ ಸಾಕಷ್ಟು ತಿರುವುಗಳು ಇರುವ ಕಾರಣ ರೈಲುಗಳು ಗರಿಷ್ಠ ಗಂಟೆಗೆ 90 ಕಿ.ಮೀ. ವೇಗದಲ್ಲಿ ಸಂಚರಿಸುತ್ತಿವೆ. ಈ ತಿರುವುಗಳನ್ನು ತೆಗೆದು ಸಿಗ್ನಲ್ ವ್ಯವಸ್ಥೆಯನ್ನು ಸುಧಾರಿಸಲು ₹ 381 ಕೋಟಿ ಅನುದಾನ ನೀಡಲಾಗಿದೆ. ಮುಂದಿನ ಎರಡು ವರ್ಷಗಳಲ್ಲಿ ರಾಜ್ಯದಲ್ಲಿ ರೈಲುಗಳು ಗಂಟೆಗೆ 110 ಕಿ.ಮೀ. ವೇಗದಲ್ಲಿ ಸಂಚರಿಸಲು ಸಾಧ್ಯವಾಗಲಿದೆ. ನಾಲ್ಕು ವರ್ಷಗಳ ನಂತರ ರೈಲುಗಳ ವೇಗವನ್ನು ಗಂಟೆಗೆ 130 ರಿಂದ 160 ಕಿ.ಮೀ.ಗೆ ಹೆಚ್ಚಿಸಬಹುದಾಗಿದೆ' ಎಂದು ಸಚಿವ ವೈಷ್ಣವ್ ಹೇಳಿದರು.