ನವದೆಹಲಿ : ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ಮನರೇಗ)ಯ ಪರಿಣಾಮಕಾರಿ ಅನುಷ್ಠಾನಕ್ಕಾಗಿ ರಾಜ್ಯಗಳಿಗೆ ಸಾಕಷ್ಟು ಪ್ರಮಾಣದಲ್ಲಿ ಹಣ ನೀಡುವಂತೆ ಕೇಂದ್ರ ಸರಕಾರಕ್ಕೆ ಸೂಚನೆ ನೀಡಬೇಕೆಂದು ಕೋರಿ ತಾನು ಈಗಾಗಲೇ ಸಲ್ಲಿಸಿರುವ ಅರ್ಜಿಯನ್ನು ತುರ್ತಾಗಿ ವಿಚಾರಣೆಗೆ ಎತ್ತಿಕೊಳ್ಳಬೇಕು ಎಂದು ಕೋರಿ 'ಸ್ವರಾಜ್ ಅಭಿಯಾನ' ರಾಜಕೀಯ ಪಕ್ಷವು ಮಂಗಳವಾರ ಸುಪ್ರೀಂ ಕೋರ್ಟ್ ಗೆ ಮನವಿ ಮಾಡಿದೆ.
ವಕೀಲ ಪ್ರಶಾಂತ್ ಭೂಷಣ್ ಸಲ್ಲಿಸಿದ ಮನವಿಯನ್ನು ಪರಿಗಣಿಸಿದ ಮುಖ್ಯ ನ್ಯಾಯಾಧೀಶ ಡಿ.ವೈ. ಚಂದ್ರಚೂಡ್, ನ್ಯಾ. ಪಿ.ಎಸ್. ನರಸಿಂಹ ಮತ್ತು ನ್ಯಾ. ಜೆ.ಬಿ. ಪರ್ದಿವಾಲಾ ಅವರನ್ನೊಳಗೊಂಡ ನ್ಯಾಯಪೀಠವು, ತುರ್ತು ವಿಚಾರಣೆ ನಡೆಸುವಂತೆ ಸೂಚಿಸಿ ಸಂಬಂಧಪಟ್ಟ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಲಾಗುವುದು ಎಂದು ಹೇಳಿತು.
''ನ್ಯಾ. ಅಜಯ್ ರಸ್ತೋಗಿ ನೇತೃತ್ವದ ಪೀಠದ ಮುಂದೆ ಅರ್ಜಿಯನ್ನು ಮಂಡಿಸಲು ನಾವು ನಿಮಗೆ ಸ್ವಾತಂತ್ರ ನೀಡುತ್ತೇವೆ'' ಎಂದು ಮುಖ್ಯ ನ್ಯಾಯಾಧೀಶ ಹೇಳಿದರು. ಈ ವಿಷಯಕ್ಕೆ ಸಂಬಂಧಿಸಿದ ಮೂಲ ಅರ್ಜಿಯ ವಿಚಾರಣೆಯನ್ನು ಮೊದಲು ಇದೇ ಪೀಠಕ್ಕೆ ವಹಿಸಲಾಗಿತ್ತು.
''2005ರ ಮಹಾತ್ಮಾ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆ (ಮನರೇಗ)ಯಡಿ ನೋಂದಾಯಿತ ದೇಶದ ಕೋಟ್ಯಂತರ ಕಾರ್ಮಿಕರು ಈಗ ತೀವ್ರ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕೆಲವು ರಾಜ್ಯಗಳಲ್ಲಿ, ಈ ಕಾರ್ಮಿಕರಿಗೆ ಬರಬೇಕಾಗಿರುವ ಬಾಕಿ ಮಜೂರಿ ಏರುತ್ತಾ ಹೋಗುತ್ತಿದೆ ಹಾಗೂ ಅವರ ಬ್ಯಾಂಕ್ ಖಾತೆಗಳಲ್ಲಿನ ಉಳಿಕೆ ಮೊತ್ತವು ಋಣಾತ್ಮಕವಾಗಿ ಏರುತ್ತಿದೆ'' ಎಂದು ತನ್ನ ಹೊಸ ಅರ್ಜಿಯಲ್ಲಿ ಈ ರಾಜಕೀಯ ಪಕ್ಷ ಹೇಳಿದೆ.
2021 ನವೆಂಬರ್ 26ರ ವೇಳೆಗೆ, ರಾಜ್ಯ ಸರಕಾರಗಳು 9,682 ಕೋಟಿ ರೂಪಾಯಿ ಕೊರತೆಯನ್ನು ಎದುರಿಸುತ್ತಿದ್ದವು ಹಾಗೂ ಆ ವರ್ಷಕ್ಕೆ ಒದಗಿಸಲಾದ ನಿಧಿಯನ್ನು ವರ್ಷ ಪೂರ್ಣಗೊಳ್ಳುವ ಮೊದಲೇ ಸಂಪೂರ್ಣವಾಗಿ ಖರ್ಚು ಮಾಡಲಾಗಿತ್ತು ಎಂದು ಅರ್ಜಿ ಹೇಳಿದೆ.
ಪ್ರತಿ ಮುಂದಿನ ತಿಂಗಳು ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲು ರಾಜ್ಯಗಳ ಬಳಿ ಸಾಕಷ್ಟು ಹಣ ಇರುವಂತೆ ಖಾತರಿಪಡಿಸುವ ವ್ಯವಸ್ಥೆಯೊಂದನ್ನು ರೂಪಿಸುವಂತೆ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡುವಂತೆ ಅರ್ಜಿಯು ಸುಪ್ರೀಂ ಕೋರ್ಟ್ಗೆ ಮನವಿ ಮಾಡಿದೆ.