ತಿರುವನಂತಪುರ: 'ಚಲಿಸುತ್ತಿರುವ ರೈಲಿನ ಬೋಗಿಯೊಳಗೆ ಬೆಂಕಿ ಹಚ್ಚಿ ಮೂವರು ಪ್ರಯಾಣಿಕರ ಸಾವಿಗೆ ಕಾರಣನಾಗಿದ್ದ ಆರೋಪಿಯನ್ನು ಮಹಾರಾಷ್ಟ್ರ ಭಯೋತ್ಪಾದನಾ ನಿಗ್ರಹ ಪಡೆಯವರು (ಎಟಿಎಸ್) ರತ್ನಗಿರಿಯಲ್ಲಿ ಬಂಧಿಸಿದ್ದಾರೆ. ಆತನನ್ನು ಶೀಘ್ರವೇ ರಾಜ್ಯಕ್ಕೆ ಕರೆದುಕೊಂಡು ಬರಲಾಗುತ್ತದೆ' ಎಂದು ಕೇರಳದ ಪೊಲೀಸ್ ಮಹಾನಿರ್ದೇಶಕ ಅನಿಲ್ ಕಾಂತ್ ಬುಧವಾರ ಹೇಳಿದ್ದಾರೆ.
ಮಾಧ್ಯಮದವರೊಂದಿಗೆ ಮಾತನಾಡಿದ ಅವರು, 'ಎಸ್‌ಐಟಿ, ಕೇಂದ್ರೀಯ ತನಿಖಾ ಸಂಸ್ಥೆಗಳು ಹಾಗೂ ಮಹಾರಾಷ್ಟ್ರ ಪೊಲೀಸರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿ ಶಾರುಖ್ ಸೈಫಿ ಎಂಬಾತನನ್ನು ಬಂಧಿಸಿದ್ದಾರೆ. ಆತ ಸದ್ಯ ರತ್ನಗಿರಿಯಲ್ಲಿದ್ದಾನೆ. ಆತನನ್ನು ರಾಜ್ಯಕ್ಕೆ ಕರೆತರುವ ಪ್ರಕ್ರಿಯೆ ನಡೆಯುತ್ತಿದೆ' ಎಂದಿದ್ದಾರೆ.
'ಏತಕ್ಕಾಗಿ ಆತ ರೈಲು ಬೋಗಿಯೊಳಗೆ ಬೆಂಕಿ ಹಚ್ಚಿದ್ದ ಎಂಬುದು ವಿಚಾರಣೆಯ ಬಳಿಕ ಗೊತ್ತಾಗಲಿದೆ. ರಾಜ್ಯದ ಪೊಲೀಸ್ ಅಧಿಕಾರಿಗಳನ್ನೊಳಗೊಂಡ ತಂಡವೊಂದು ರತ್ನಗಿರಿಗೆ ತಲುಪಿದೆ. ಮಹಾರಾಷ್ಟ್ರ ಪೊಲೀಸರು ವಿಚಾರಣೆಗಾಗಿ ಆರೋಪಿಯನ್ನು ನಮ್ಮ ತಂಡದ ವಶಕ್ಕೆ ಒಪ್ಪಿಸಲಿದ್ದಾರೆ' ಎಂದು ಹೇಳಿದ್ದಾರೆ.
ಆಲಪ್ಪುಳ-ಕಣ್ಣೂರು ಎಕ್ಸಿಕ್ಯುಟಿವ್ ಎಕ್ಸ್‌ಪ್ರೆಸ್ ರೈಲಿನಲ್ಲಿ ಭಾನುವಾರ ರಾತ್ರಿ 9.30ರ ಸುಮಾರಿಗೆ ಈ ಕೃತ್ಯ ನಡೆದಿತ್ತು. ಘಟನೆಯಲ್ಲಿ ಒಂಬತ್ತು ಮಂದಿ ಗಾಯಗೊಂಡಿದ್ದರು.