ಬೆಂಗಳೂರು: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತವೂ ಸದಸ್ಯತ್ವ ಪಡೆಯಬೇಕೆಂಬ ವಿಷಯದಲ್ಲಿ ಕೆಲವು ಸದಸ್ಯ ರಾಷ್ಟ್ರಗಳು ಉತ್ಸುಕವಾಗಿಲ್ಲ ಎಂದು ವಿದೇಶಾಂಗ ವ್ಯವಹಾರಗಳ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ಬೆಂಗಳೂರಿನಲ್ಲಿ ಭಾನುವಾರ ನಡೆದ ಸಂವಾದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
'ಭದ್ರತಾ ಮಂಡಳಿಯ ಸದಸ್ಯತ್ವಕ್ಕಾಗಿ ಭಾರತ ಪ್ರಯತ್ನ ನಡೆಸದೇ ಇರುವುದಿಲ್ಲ. ಭದ್ರತಾ ಮಂಡಳಿಯಲ್ಲಿ ಈಗ ಕುಳಿತಿರುವ ಕೆಲ ಸದಸ್ಯರು ಭಾರತವೂ ಸದಸ್ಯ ರಾಷ್ಟ್ರವಾಗಬೇಕೆಂಬ ವಿಷಯದಲ್ಲಿ ಉತ್ಸುಕರಾಗಿಲ್ಲ. ಎಷ್ಟು ದಿನ (ಭದ್ರತಾ ಮಂಡಳಿ) ಬಾಗಿಲು ಮುಚ್ಚಿರುತ್ತದೆ? ನಮ್ಮದು ಹೆಚ್ಚು ಜನಸಂಖ್ಯೆ ಹೊಂದಿರುವ ರಾಷ್ಟ್ರ. ನಮ್ಮದು ವಿಶ್ವದ ಉನ್ನತ ಆರ್ಥಿಕತೆ' ಎಂದು ಅವರು ಹೇಳಿದರು.
ಮಂಡಳಿಯಲ್ಲಿ 2021-2022ರ ಅವಧಿಯ ಭಾರತದ ಎರಡು ವರ್ಷಗಳ ತಾತ್ಕಾಲಿಕ ಸದಸ್ಯತ್ವವು 2022ರ ಡಿಸೆಂಬರ್ 31ರಂದು ಕೊನೆಗೊಂಡಿದೆ
2028-29ರ ಅವಧಿಗೆ ಭದ್ರತಾ ಮಂಡಳಿಯ ತಾತ್ಕಾಲಿಕ ಸದಸ್ಯತ್ವಕ್ಕೆ ದೇಶದ ಉಮೇದುವಾರಿಕೆಯನ್ನು ಜೈಶಂಕರ್ ಈಗಾಗಲೇ ಘೋಷಿಸಿದ್ದಾರೆ.
ಮಾಸಿಕ ಬದಲಾವಣೆ ಆಧಾರದ ಮೇಲೆ 2022ರ ಡಿಸೆಂಬರ್ 1ರಂದು, ಭಾರತವು ಭದ್ರತಾ ಮಂಡಳಿಯ ಅಧ್ಯಕ್ಷತೆಯನ್ನೂ ವಹಿಸಿಕೊಂಡಿತ್ತು.
ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಶಾಶ್ವತ ಮತ್ತು ತಾತ್ಕಾಲಿಕ ವರ್ಗದಲ್ಲಿ ಸದಸ್ಯ ರಾಷ್ಟ್ರಗಳ ಸಂಖ್ಯೆಯನ್ನು ಹೆಚ್ಚಿಸುವುದರ ಅಗತ್ಯವಿದೆ. ಇದರಿಂದ ಅಭಿವೃದ್ಧಿ ರಾಷ್ಟ್ರಗಳು, ಪ್ರಾತಿನಿಧ್ಯವಿಲ್ಲದ ವಲಯಗಳ ದೇಶಗಳ ಧ್ವನಿಗೂ ವಿಶ್ವದ ಪ್ರಮುಖ ಸಂಸ್ಥೆಯಲ್ಲಿ ಮನ್ನಣೆ ಸಿಗಲಿದೆ ಎಂದು ಭಾರತ ಪ್ರತಿಪಾದಿಸಿದೆ.