ನವದೆಹಲಿ: ಆಧಾರ್ ಜೊತೆ ಪಾನ್ ಕಾರ್ಡ್ ಜೋಡಣೆ ಮಾಡದೇ ಇದ್ದರೆ ದಂಡ ವಿಧಿಸುವ ಕ್ರಮವನ್ನು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಗುರುವಾರ ಸಮರ್ಥಿಸಿಕೊಂಡಿದ್ದಾರೆ.
2022 ಮಾರ್ಚ್ 31ರ ವರೆಗೆ ಆಧಾರ್-ಪಾನ್ ಜೋಡಣೆ ಉಚಿತವಾಗಿತ್ತು.
ಕಳೆದ ವರ್ಷ ಎಪ್ರಿಲ್ 1ರಿಂದ 500 ರೂ ವಿಳಂಬ ಶುಲ್ಕ ವಿಧಿಸಲಾಗಿತ್ತು. ಅನಂತರ ಜುಲೈ 1ರಿಂದ ಈ ವಿಳಂಬ ಶುಲ್ಕವನ್ನು 1 ಸಾವಿರ ರೂಪಾಯಿಗೆ ಏರಿಕೆ ಮಾಡಲಾಗಿತ್ತು. ಇಷ್ಟೆಲ್ಲಾ ಅವಕಾಶ ಕೊಟ್ಟ ಬಳಿಕವೂ ಆಧಾರ್ ಕಾರ್ಡ್ ಜೊತೆಗೆ ಪಾನ್ ಕಾರ್ಡ್ ಜೋಡಣೆ ಮಾಡದೇ ಇದ್ದರೆ 2023 ಜೂನ್ 30ರ ಬಳಿಕ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ ಎಂದು ಅವರು ಹೇಳಿದ್ದಾರೆ.
ಹೊಸದಿಲ್ಲಿಯಲ್ಲಿ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಿರ್ಮಲಾ ಸೀತಾರಾಮನ್, ''ಆಧಾರ್ ಹಾಗೂ ಪಾನ್ ಕಾರ್ಡ್ ಜೋಡಣೆ ಮಾಡಲೇ ಬೇಕು. ಇದಕ್ಕಾಗಿ ನಾವು ಬಹಳಷ್ಟು ಸಮಯ ನೀಡಿದ್ದೆವು. ಈಗಲಾದರೂ ಜೋಡಣೆ ಮಾಡಬೇಕಿದೆ'' ಎಂದರು.
''ಈ ಗಡು ಮುಗಿದರೆ, ದಂಡದ ಮೊತ್ತ ಹೆಚ್ಚಾಗುತ್ತದೆ. ಹಣಕಾಸು ಸಚಿವಾಲಯ ಮಾರ್ಚ್ 28ರಂದು ನೀಡಿದ ಹೇಳಿಕೆ ಪ್ರಕಾರ, ಪಾನ್ ಹೊಂದಿರುವ ಯಾವುದೇ ವ್ಯಕ್ತಿ ಅದನ್ನು ಆಧಾರ್‌ನೊಂದಿಗೆ ಜೋಡಣೆ ಮಾಡಬೇಕು. ಇಲ್ಲದಿದ್ದರೆ, ಟಿಡಿಎಸ್ ಹಾಗೂ ಟಿಸಿಎಸ್ ಹೆಚ್ಚಳ ಸೇರಿದಂತೆ ಹಲವು ಪರಿಣಾಮಗಳನ್ನು ಎದುರಿಸಬೇಕಾಗಬಹುದು'' ಎಂದು ಅವರು ಹೇಳಿದ್ದಾರೆ.
2017 ಜುಲೈ 1ರ ಒಳಗೆ ಪಾನ್ ಕಾರ್ಡ್- ಆಧಾರ್ ಲಿಂಕ್ ಮಾಡಬೇಕು ಎಂದು ಕೇಂದ್ರ ಸರಕಾರ ಹೇಳಿತ್ತು. 2023 ಮಾರ್ಚ್ 3ರ ಒಳಗೆ ದಂಡದೊಂದಿಗೆ ಜೋಡಣೆ ಮಾಡಲು ಅವಕಾಶ ನೀಡಿತ್ತು. ಜೋಡಣೆ ಮಾಡದೇ ಇದ್ದರೆ ಎಪ್ರಿಲ್ 1ರಿಂದ ಕಠಿಣ ಕ್ರಮ ಎದುರಿಸಬೇಕಾದೀತು ಎಂದು ಎಚ್ಚರಿಕೆ ನೀಡಿತ್ತು. ಅನಂತರ ಗಡುವನ್ನು 2023 ಜೂನ್ 30ಕ್ಕೆ ವಿಸ್ತರಣೆ ಮಾಡಿದೆ.
ಆದುದರಿಂದ ಕೇಂದ್ರ ಸರಕಾರದ ಅಂತಿಮ ಗಡು 2023 ಜೂನ್ 30ರ ಒಳಗೆ ಆಧಾರ್ ಜೊತೆಗೆ ಪಾನ್ ಲಿಂಕ್ ಆಗದೇ ಇದ್ದರೆ 2023 ಜುಲೈ 1ರಿಂದ ಪಾನ್ ಕಾರ್ಡ್ ನಿಷ್ಕ್ರಿಯಗೊಳ್ಳಲಿದೆ.