ಮುಳ್ಳೇರಿಯ: ಜಿಲ್ಲೆಯ ಬಹುತೇಕ ಹೊಳೆಗಳೂ ಬತ್ತಿ ಬರಡಾಗಿದ್ದು, ಕುಡಿಯುವ ನೀರಿನ ಸಮಸ್ಯೆ ಅತಿಯಾಗಿ ಕಾಡಲಾರಂಭಿಸಿದೆ. ಪ್ರಮುಖ ವಾಣಿಜ್ಯ ಬೆಳೆಯಾಗಿರುವ ಅಡಕೆ ಕೃಷಿ ನೀರಿಲ್ಲದೆ ಒಣಗುವ ಸ್ಥಿತಿ ನಿರ್ಮಾಣವಾಗಿದೆ. 250ರಿಂದ 300ಅಡಿ ಆಳದಲ್ಲಿ ಕೊಳೆವೆಬಾವಿಗೆ ಲಭ್ಯವಾಗುತ್ತಿದ್ದ ಅಂತರ್ಜಲಮಟ್ಟ 500ಅಡಿಗೂ ಹೆಚ್ಚು ಆಳಕ್ಕಿಳಿದಿದೆ. ಕೃಷಿಕರು ತಮ್ಮದೇ ವೆಚ್ಚದಲ್ಲಿ ನಿರ್ಮಿಸಿಕೊಳ್ಳುತ್ತಿರುವ ಕಟ್ಟಗಳಲ್ಲಿ ಕೆಲವದರಲ್ಲಿ ಒಂದಷ್ಟು ನೀರು ದಾಸ್ತಾನಿದ್ದರೆ, ಉಳಿದೆಡೆ ಹೊಳೆಗಳಲ್ಲಿ ಬಾವಿಗಳನ್ನು ನಿರ್ಮಿಸಿ ಪಂಪಿನ ಮೂಲಕ ನೀರು ಮೇಲಕ್ಕೆತ್ತಿ ಕೃಷಿಕಾರ್ಯಗಳಿಗೆ ಬಳಸಿಕೊಳ್ಳುತ್ತಿದ್ದಾರೆ. ಬೇಸಿಗೆಯಲ್ಲಿ ನೀರಿನ ಸಮಸ್ಯೆ ಎದುರಾದಾಗ ಮಾತ್ರ ಅಂತರ್ಜಲ ಸಂರಕ್ಷಣೆ ಬಗ್ಗೆ ಜಾಗೃತರಾಗುವ ಜನತೆ, ಮಳೆಗಾಲ ಆರಂಭಗೊಳ್ಳುತ್ತಿದ್ದಂತೆ ಸುಮ್ಮನಾಗುತ್ತಾರೆ. ಮುಂದಿನ ದಿನಗಳಲ್ಲಿ ಅಂತರ್ಜಲಮಟ್ಟ ಹೆಚ್ಚಿಸುವುದಕ್ಕಾಗಿ ಬೃಹತ್ ಆಂದೋಲನ ನಡೆಸಬೇಕಾದ ಅಗತ್ಯವಿರುವುದಾಗಿ ಜಲತಜ್ಞರು ಎಚ್ಚರಿಸಿದ್ದಾರೆ.
ಬರಡಾದ ಪಯಸ್ವಿನಿ:
ಸುಳ್ಯದ ಮೂಲಕ ಹರಿದುಬರುವ ಪಯಸ್ವಿನಿ ಹೊಳೆ ಬೊವಿಕ್ಕಾನ ಮೂನಾಂಕಡವು ಹೊಳೆಯೊಂದಿಗೆ ಸಂಗಮಿಸಿ ಚಂದ್ರಗಿರಿ ಹೊಳೆಯಾಗಿ ಅರಬೀಸಮುದ್ರ ಸೇರುತ್ತಿದೆ. ಪಯಸ್ವಿನಿ ಹೊಳೆ ಈ ಬಾರಿ ಬರಡಾಗಿದೆ. ಅತ್ಯಪೂರ್ವ ಮೀನುಗಳ ವಾಸಕೇಂದ್ರವಾಗಿರುವ ನೆಯ್ಯಂಗಯ ಪ್ರದೇಶದಲ್ಲೂ ನೀರಿನ ಕೊರತೆ ಎದುರಾಗಿದೆ. ಪಯಸ್ವಿನಿ ಹೊಳೆ ಬರಡಾಗಿರುವುದು ಕಾಸರಗೋಡು ಜಿಲ್ಲೆಗೆ ನೀರು ಪೂರೈಕೆಮಾಡುವ ಬಾವಿಕೆರೆ ಶುದ್ಧಕುಡಿಯುವ ನೀರಿನ ಘಟಕಕ್ಕೂ ಆತಂಕ ಎದುರಾಗಿದೆ. ಬಾವಿಕೆರೆಯಲ್ಲಿ ಹೊಸದಾಗಿ ರೆಗ್ಯುಲೇಟರ್ ಕಂ ಬ್ಯಾರೇಜ್ ನಿರ್ಮಾಣಗೊಂಡಿದ್ದರೂ, ಪಯಸ್ವಿನಿ ಹೊಳೆಯಲ್ಲಿ ನೀರು ಹರಿದುಬಂದರಷ್ಟೆ ನಾಲ್ಕು ಪಂಚಾಯಿತಿ ಹಾಗೂ ನಗರಸಭಾ ವ್ಯಾಪ್ತಿಗೆ ನೀರು ಪೂರೈಕೆ ಸಾಧ್ಯವಾಗಲಿದೆ. ಈ ಹಿಂದೆ ಮರಳುಚೀಲದ ತಾತ್ಕಾಲಿಕ ಅಣೆಕಟ್ಟು ನಿರ್ಮಾಣಗೊಳ್ಳುತ್ತಿದ್ದ ಸಂದರ್ಭ ಇಲ್ಲಿ ಸಿಹಿನೀರಿನೊಂದಿಗೆ ಉಪ್ಪುನೀರು ಸೇರ್ಪಡೆಗೊಂಡು ಬೇಸಿಗೆಯಲ್ಲಿ ಬಳಕೆಗೆ ಅಯೋಗ್ಯವಾಗುತ್ತಿತ್ತು. ಹೊಸ ಡ್ಯಾಂ ನಿರ್ಮಾಣಗೊಂಡಿರುವುದರಿಂದ ಈ ಸಮಸ್ಯೆ ದೂರಾಗಿದ್ದರೂ, ಹೊಳೆಯಲ್ಲಿ ನೀರಿನ ಪ್ರಮಾಣ ಕುಸಿದಿರುವುದರಿಂದ ಮುಳಿಯಾರ್, ಮಧೂರು, ಚೆಮ್ನಾಡ್, ಮೊಗ್ರಾಲ್ ಹಾಗೂ ಕಾಸರಗೋಡು ನಗರಸಭಾ ವ್ಯಾಪ್ತಿಗೆ ಶುದ್ಧಕುಡಿಯುವ ನೀರಿನ ಪೂರೈಕೆಯಲ್ಲಿ ಏರುಪೇರಾಗುವ ಸಾಧ್ಯತೆ ಎದುರಾಗಿದೆ. ಪ್ರಸಕ್ತ ನೀರಿನ ಲಭ್ಯತೆಗನುಸರಿಸಿ ದಿನ ಬಿಟ್ಟು ದಿನದಲ್ಲಿ ನೀರು ಪೂರೈಕೆ ನಡೆಸಲಾಗುತ್ತಿದೆ.
ಬರಡಾಗುತ್ತಿರುವ ಹೊಳೆಗಳು: ಕುಡಿಯುವ ನೀರಿಗೆ ಕ್ಷಾಮ, ಅತಂತ್ರತೆಯಲ್ಲಿ ಕೃಷಿಕರು
0
ಏಪ್ರಿಲ್ 20, 2023