ಮುಂಬೈ: ಮಾಧ್ಯಮಗಳಲ್ಲಿ ಪ್ರಸಾರವಾಗುವ ಕೇಂದ್ರ ಸರಕಾರದ ಕುರಿತ ಸುದ್ದಿಗಳ ತಪಾಸಣೆ ನಡೆಸುವುದಕ್ಕಾಗಿ ಸತ್ಯಶೋಧಕ ಸಂಸ್ಥೆಯೊಂದರ ಸ್ಥಾಪನೆಗಾಗಿ 2021 ರ ಮಾಹಿತಿ ತಂತ್ರಜ್ಞಾನ ಕಾನೂನುಗಳ ತಿದ್ದುಪಡಿಗೆ ಬಯಸಿರುವ ಬಗ್ಗೆ ವಿವರಣೆ ನೀಡುವಂತೆ ಬಾಂಬೆ ಹೈಕೋರ್ಟ್ ಮಂಗಳವಾರ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.
ಇಂತಹ ತಿದ್ದುಪಡಿಗಳ ಸಾಂವಿಧಾನಿಕ ಸಿಂದುತ್ವವನ್ನು ಪ್ರಶ್ನಿಸಿ ಜನಪ್ರಿಯ ಸ್ಟಾಂಡಪ್ ಕಾಮಿಡಿಯನ್ ಕುನಾಲ್ ಕಾಮ್ರಾ ಅವರು ಸಲ್ಲಿಸಿದ ಅರ್ಜಿಯ ಆಲಿಕೆಯನ್ನು ನಡೆಸಿದ ನ್ಯಾಯಪೀಠ ಈ ನಿರ್ದೇಶನ ನೀಡಿದೆ. ಎಪ್ರಿಲ್ 19ರೊಳಗೆ ಕೇಂದ್ರ ಸರಕಾರವು ಈ ವಿಷಯದ ಬಗ್ಗೆ ಅದರ ನಿಲುವನ್ನು ತಿಳಿಸಬೇಕೆಂದು ನ್ಯಾಯಾಲಯ ಕೇಂದ್ರ ಸರಕಾರಕ್ಕೆ ನಿರ್ದೇಶನ ನೀಡಿದೆ.
ಈ ತಿದ್ದುಪಡಿಯ ಅಗತ್ಯವೆನಿಸುವುದಕ್ಕೆ ಯಾವುದೇ ವಾಸ್ತವಿಕ ನೆಲೆಗಟ್ಟು ಅಥವಾ ತಾರ್ಕಿಕ ಕಾರಣವಿದೆಯೇ ಎಂದು ನ್ಯಾಯಾಲಯ ಪ್ರಶ್ನಿಸಿದೆ. ಈ ತಿದ್ದುಪಡಿಯಿಂದ ಪ್ರತಿಕೂಲ ಪರಿಣಾಮವಾದೀತೆಂದು ಅರ್ಜಿದಾರ ಕಾಮ್ರಾ ಭಾವಿಸಿದ್ದಾರೆ ಎಂದು ಅದುಹೇಳಿದೆ.
ಆನ್ಲೈನ್ ಗೇಮಿಂಗ್ ಹಾಗೂ ಕೇಂದ್ರ ಸರಕಾರಕ್ಕೆ ಸಂಬಂಧಿಸಿದ ಸುದ್ದಿಗಳನ್ನು ನಿಯಂತ್ರಿಸಲು ಕೇಂದ್ರ ಸರಕಾರವು ಎಪ್ರಿಲ್ 6ರಂದು 2021ರ ಮಾಹಿತಿ ತಂತ್ರಜ್ಞಾನ ನಿಯಮಾವಳಿಗಳನ್ನು ಜಾರಿಗೆ ತಂದಿತು. ಕೇಂದ್ರ ಸರಕಾರದ ವ್ಯವಹಾರಗಳಿಗೆ ಸಂಬಂಧಿಸಿದ ಯಾವುದೇ ವಿಷಯವನ್ನು ನಕಲಿ ಅಥವಾ ಸುಳ್ಳು ಇಲ್ಲವೇ ತಪ್ಪುದಾರಿಗೆಳೆಯುವಂತಹದ್ದು' ಎಂಬುದಾಗಿ ಟ್ಯಾಗ್ ಮಾಡುವ ಅಧಿಕಾರ ಹೊಂದಿರುವ ಸತ್ಯಶೋಧಕ ಸಂಸ್ಥೆಯ ಸ್ಥಾಪನೆಗೆ ಕೇಂದ್ರ ಮಾಹಿತಿತಂತ್ರಜ್ಞಾನ ಸಚಿವಾಲಯವು ಅಧಿಸೂಚನೆಯನ್ನು ಹೊರಡಿಸಲಿದೆ ಎಂದು ನಿಯಮಾವಳಿಗಳು ತಿಳಿಸುತ್ತವೆ.
ಕಳೆದ ಜನವರಿಯಲ್ಲಿ ಮಾಹಿತಿತಂತ್ರಜ್ಞಾನ ಕಾನೂನಿನ ಕರಡು ನಿಯಮಗಳನ್ನು ಸಾರ್ವಜನಿಕವಾಗಿ ಪ್ರಕಟಿಸಲಾಗಿತ್ತು. ಮಾಹಿತಿ ಹಾಗೂ ಪ್ರಸಾರ ಸಚಿವಾಲಯದ ಅಧೀನದಲ್ಲಿರುವ ಪತ್ರಿಕಾ ಮಾಹಿತಿ ಬ್ಯೂರೋ ಅಥವಾ ಕೇಂದ್ರ ಸರಕಾರವು ಅಧಿಕಾರ ನೀಡಿರುವ ಇತರ ಯಾವುದೇ ಏಜೆನ್ಸಿಗೆ, ಮಾಧ್ಯಮಗಳಲ್ಲಿ ಪ್ರಸಾರವಾಗುವ ಸುದ್ದಿಯನ್ನು ನಕಲಿ ಎಂಬುದಾಗಿ ಟ್ಯಾಗ್ ಮಾಡುವ ಅಧಿಕಾರವನ್ನು ಹೊಂದಿರುವುದು ಎಂದು ತಿಳಿಸಲಾಗಿತ್ತು.
ಆದರೆ ಗುರುವಾರ ಅಧಿಸೂಚನೆಗೆ ಮಾಡಲಾದ ಅಂತಿಮ ತಿದ್ದುಪಡಿಯಲ್ಲಿ ಪತ್ರಿಕಾ ಮಾಹಿತಿ ಬ್ಯೂರೋದ ಸತ್ಯಶೋಧಕ ದಳದ ಪ್ರಸ್ತಾವನೆ ಮಾಡಲಾಗಿಲ್ಲ. ಅಧಿಕೃತ ಇಲಾಖೆಗಳು ತಾವಾಗಿಯೇ ನಿಖರವೆಂದು ದೃಢೀಕರಿಸಿದ್ದ ಹೇಳಿಕೆಗಳನ್ನೇ 'ಸುಳ್ಳು ಸುದ್ದಿ' ಎಂಬ ಹಣೆಪಟ್ಟಿ ಕಟ್ಟಿದ್ದಕ್ಕಾಗಿ ಪತ್ರಿಕಾ ಮಾಹಿತಿ ಬ್ಯೂರೋ ವ್ಯಾಪಕ ಟೀಕೆಗೊಳಗಾಗಿತ್ತು.
ಸುದ್ದಿಗಳ ತಪಾಸಣೆಗೆ ಸತ್ಯಶೋಧಕ ಸಂಸ್ಥೆ ಸ್ಥಾಪನೆ: ಕೇಂದ್ರದ ಇಚ್ಛೆಯನ್ನು ಪ್ರಶ್ನಿಸಿದ ಬಾಂಬೆ ಹೈಕೋರ್ಟ್
0
ಏಪ್ರಿಲ್ 12, 2023
Tags