ನವದೆಹಲಿ: 'ಕೋವಿಡ್‌ನ ಹೊಸ ರೂಪಾಂತರವು ಹಿಂದಿನಷ್ಟು ಅಪಾಯಕಾರಿ ಅಲ್ಲ ಹಾಗೂ ಹಿಂದಿನಂತೆ ಹೆಚ್ಚಿನ ಪ್ರಮಾಣದಲ್ಲಿ ಜನರು ಆಸ್ಪತ್ರೆಗೆ ದಾಖಲಾಗುತ್ತಿಲ್ಲವಾದರೂ ಜನರು ಈ ಬಗ್ಗೆ ಎಚ್ಚರಿಕೆ ವಹಿಸಬೇಕು' ಎಂದು ಕೇಂದ್ರ ಆರೋಗ್ಯ ಸಚಿವಾಲಯದ ಉನ್ನತ ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.
'ಹೊಸ ರೂಪಾಂತರಿ ತಳಿಗಳು ಬರುತ್ತಲೇ ಇರುತ್ತವೆ. ಈಗ ಬಂದಿರುವುದು ಹೊಸ ರೂಪಾಂತರ. ಈ ಬಗ್ಗೆ ಪ್ರಯೋಗಾಲಯದಲ್ಲಿ ಅಧ್ಯಯನವನ್ನು ಮಾಡಲಾಗಿದೆ' ಎಂದು ಅವರು ಹೇಳಿದ್ದಾರೆ.
'ಪ್ರಸ್ತುತ ಎಕ್ಸ್‌ಬಿಬಿ 1.16 ರೂಪಾಂತರವು ದೇಶದಲ್ಲಿ ಕೋವಿಡ್ ಪ್ರಕರಣಗಳಕ್ಕೆ ಉಲ್ಪಣಕ್ಕೆ ಕಾರಣವಾಗಿದೆ' ಎಂದೂ ಅವರು ಮಾಹಿತಿ ನೀಡಿದ್ದಾರೆ.
ದೇಶದಲ್ಲಿ ಸೋಮವಾರ ಕೋವಿಡ್ ಸೋಂಕು ಪ್ರಕರಣಗಳ ಸಂಖ್ಯೆ 3,641 ಆಗಿದೆ. ದೈನಂದಿನ ಪ್ರಕರಣಗಳ ಪಾಸಿಟಿವಿ ದರವು 6.12 ಇದೆ. 24 ಗಂಟೆಗಳ ಅವಧಿಯಲ್ಲಿ ಮಹಾರಾಷ್ಟ್ರದಲ್ಲಿ ಮೂವರು, ದೆಹಲಿ, ಕೇರಳ, ಕರ್ನಾಟಕ ಮತ್ತು ರಾಜಸ್ಥಾನದಲ್ಲಿ ತಲಾ ಒಬ್ಬರು ಸಾವಿಗೀಡಾಗಿದ್ದಾರೆ ಎಂದು ಸಚಿವಾಲಯದ ಅಂಕಿಅಂಶಗಳು ತಿಳಿಸಿವೆ.
ನೇಪಾಳದಲ್ಲಿ ಓಮೈಕ್ರಾನ್ ಪತ್ತೆ (ಕಠ್ಮಂಡು): ನೇಪಾಳದಲ್ಲಿ ಸೋಮವಾರ 'ಕೋವಿಡ್ 19 ಎಕ್ಸ್‌ಬಿಬಿ 1.16' ಎಂದು ಗುರುತಿಸಲಾಗದ ಓಮೈಕ್ರಾನ್‌ನ ಹೊಸ ರೂಪಾಂತರವು ಪತ್ತೆಯಾಗಿದೆ. ದೇಶಾದ್ಯಂತ ಒಟ್ಟು 24 ರೋಗಿಗಳ ಪೈಕಿ 10 ರೋಗಿಗಳಲ್ಲಿ ಈ ರೀತಿಯ ಹೊಸ ರೂಪಾಂತರವು ಇರುವುದು ದೃಢಪಟ್ಟಿದೆ.
ಈ ರೀತಿಯ ರೂಪಾಂತರವು ನೆರೆಯ ಭಾರತದಲ್ಲಿ ಪತ್ತೆಯಾಗಿದ್ದು, ಅಲ್ಲಿಂದ ಹರಡುತ್ತಿದೆ. ಈ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕೆಂದು ನೇಪಾಳದ ಆರೋಗ್ಯ ಸಚಿವಾಲಯವು ಸಲಹೆ ನೀಡಿದೆ.