ಕೋಟ: ಲೋಕಸಭೆಯ ಸ್ಪೀಕರ್ ಓಂ ಬಿರ್ಲಾ ಅವರ ಆಪ್ತ ಸಹಾಯಕರುಗಳನ್ನು ಥಳಿಸಿ ದರೋಡೆ ಮಾಡಿರುವ ಪ್ರಕರಣದಲ್ಲಿ ಕೋಟಾದ ಪೊಲೀಸರು 5 ಮಂದಿಯನ್ನು ಬಂಧಿಸಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಧ್ಯಪ್ರದೇಶದ ಕೋಟಾ-ಬುಂದಿಯವರಾಗಿದ್ದ ಇಬ್ಬರು ಆಪ್ತ ಸಹಾಯಕರುಗಳನ್ನು ದಾಳಿಕೋರರು ಥಳಿಸಿ ಅವರ ಬಳಿ ಇದ್ದ ಮೊಬೈಲ್ ಫೋನ್ ಗಳನ್ನು ದರೋಡೆ ಮಾಡಿದ್ದರು. ಬುಧವಾರ ರಾತ್ರಿ ರಾಜಸ್ಥಾನದ ಕೋಟಾದ ಶಕ್ತಿ ನಗರದಲ್ಲಿರುವ ಬಿರ್ಲಾ ಅವರ ಕಚೇರಿಯ ಬಳಿ ಈ ಘಟನೆ ನಡೆದಿತ್ತು. ಮಧ್ಯರಾತ್ರಿ 12:30 ರ ವೇಳೆಗೆ ಜೀವನ್ಧಾರ್ ಜೈನ್ (43) ಹಾಗೂ ರಾಘವೇಂದ್ರ ಸಿಂಗ್ ಅವರು ಕಚೇರಿಯ ಕೂಗಳತೆ ದೂರದಲ್ಲಿ ಅವರ ಕಾರಿನ ಬಳಿ ನಿಂತಿದ್ದರು. ಈ ವೇಳೆ ಬೈಕ್ ಗಳಲ್ಲಿ ಬಂದ 5-6 ಮಂದಿ ಅವರನ್ನು ನೆಲಕ್ಕೆ ಉರುಳಿಸಿ ಥಳಿಸಿ ಮೊಬೈಲ್ ಗಳನ್ನು ಕಸಿದು ಪರಾರಿಯಾಗಿದ್ದಾರೆ ಎಂದು ಕಿಶೋರ್ ಪುರ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್ಪೆಕ್ಟರ್ ಹರ್ಲಾಲ್ ಮೀನಾ ತಿಳಿಸಿದ್ದಾರೆ.
ಥಳಿತಕ್ಕೊಳಗಾದ ಸಂತ್ರಸ್ತರನ್ನು ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಕೋಟಾ ಪೊಲೀಸ್ ವರಿಷ್ಠಾಧಿಕಾರಿ ಶರದ್ ಚೌಧರಿ ಮತ್ತು ಕೋಟ ರೇಂಜ್ ಐಜಿ ಪ್ರಶಾನ್ ಕುಮಾರ್ ಖಮೇಸ್ರಾ ಅವರು ಘಟನೆಯ ತನಿಖೆಗೆ ಸ್ಥಳಕ್ಕೆ ಭೇಟಿ ನೀಡಿದ್ದು, ದಾಳಿಕೋರರನ್ನು ಬಂಧಿಸಲು ತಂಡಗಳನ್ನು ರಚಿಸಲು ಆದೇಶ ನೀಡಿದ್ದರು. ಸಿಸಿಟಿವಿ ದೃಶ್ಯಾವಳಿಗಳ ಆಧಾರದ ಮೇಲೆ ಅವರನ್ನು ಗುರುತಿಸಲಾಗಿತ್ತು. ಈ ಪೈಕಿ 5 ಮಂದಿಯನ್ನು ಗುರುವಾರ ಬೆಳಿಗ್ಗೆ ಪ್ರತ್ಯೇಕ ಸ್ಥಳಗಳಿಂದ ಬಂಧಿಸಲಾಗಿದೆ ಎಂದು ಕೋಟಾದ ಅಭಯ್ ಕಮಾಂಡ್ ಮತ್ತು ಕಂಟ್ರೋಲ್ ನ ಹೆಚ್ಚುವರಿ ಎಸ್ಪಿ, ಚಂದ್ರಶೀಲ್ ಠಾಕೂರ್ ತಿಳಿಸಿದ್ದಾರೆ.