ಪಣಜಿ: ಗೋವಾ ರಾಜ್ಯಪಾಲರಾಗಿದ್ದಾಗ ಸತ್ಯಪಾಲ್ ಮಲಿಕ್ ಅವರು ಪ್ರಧಾನಿ ಹಾಗೂ ಗೃಹ ಸಚಿವರಿಗೆ ಬರೆದಿದ್ದ ಪತ್ರಗಳನ್ನು ಒದಗಿಸಬೇಕು ಎಂಬ ಮಾಹಿತಿ ಹಕ್ಕು ಅರ್ಜಿಯ ಮನವಿಯನ್ನು ನಿರಾಕರಿಸಿದ್ದ ಗೋವಾ ರಾಜಭವನದ ಕ್ರಮವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಗೋವಾ ಮಾಹಿತಿ ಆಯೋಗ ತಳ್ಳಿ ಹಾಕಿದೆ ಎಂದು hindustantimes.com ವರದಿ ಮಾಡಿದೆ.
ತೆರೆದ ನ್ಯಾಯಾಲಯದಲ್ಲಿ ಮೇಲ್ಮನವಿಯನ್ನು ತಳ್ಳಿ ಹಾಕಿದ ಮಾಹಿತಿ ಆಯುಕ್ತ ವಿಶ್ವಾಸ್ ಸತಾರ್ಕರ್, ಮೇಲ್ಮನವಿಯನ್ನು ವಜಾಗೊಳಿಸಲಾಗಿದೆ ಎಂದು ಮೌಖಿಕವಾಗಿ ಆದೇಶಿಸಿದರು.
ನವೆಂಬರ್ 3, 2019ರಿಂದ ಆಗಸ್ಟ್ 18, 2020ರವರೆಗೆ ಗೋವಾ ರಾಜ್ಯಪಾಲರಾಗಿದ್ದಾಗ ಸತ್ಯಪಾಲ್ ಮಲಿಕ್ ಅವರು ಪ್ರಧಾನಿ ಹಾಗೂ ಗೃಹ ಸಚಿವರಿಗೆ ಬರೆದಿದ್ದ ಅಧಿಕೃತ ಪತ್ರಗಳ ಪ್ರತಿಯನ್ನು ಒದಗಿಸಬೇಕು ಎಂದು ಹೋರಾಟಗಾರ ಹಾಗೂ ವಕೀಲ ಏರಸ್ ರೋಡ್ರಿಗಸ್ ಅವರು ಮಾಹಿತಿ ಹಕ್ಕು ಕಾಯ್ದೆ ಅಡಿಯಲ್ಲಿ ಗೋವಾ ರಾಜಭವನಕ್ಕೆ ಅಕ್ಟೋಬರ್ 11, 2021ರಂದು ಅರ್ಜಿ ಸಲ್ಲಿಸಿದ್ದರು.
ಅದಕ್ಕೆ ಪ್ರತಿಯಾಗಿ, ಪತ್ರಗಳ ಹುಡುಕಾಟ ನಡೆಸಿದರೂ ಅವು ದೊರೆತಿಲ್ಲ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಗೌರೀಶ್ ಶಂಖ್ವಾಲ್ಕರ್ ಪ್ರತಿಕ್ರಿಯೆ ನೀಡಿದ್ದರು.
ಮತ್ತೊಂದು ಮಾಹಿತಿ ಹಕ್ಕು ಅರ್ಜಿ ಸಲ್ಲಿಸಿದ್ದ ವಕೀಲ ರೋಡ್ರಿಗಸ್, ಸತ್ಯಪಾಲ್ ಮಲಿಕ್
ಅವರು ಗೋವಾ ರಾಜ್ಯಪಾಲರಾಗಿದ್ದ ನವೆಂಬರ್ 3, 2019ರಿಂದ ಆಗಸ್ಟ್ 18, 2020 ಅವಧಿಯ
ನಡುವೆ ಗೋವಾ ರಾಜ್ಯಪಾಲರು ಪ್ರಧಾನಿ ಹಾಗೂ ಕೇಂದ್ರ ಗೃಹ ಸಚಿವರಿಂದ ಸ್ವೀಕರಿಸಿರುವ
ಅಧಿಕೃತ ಪತ್ರಗಳ ಪ್ರತಿಯನ್ನು ಒದಗಿಸುವಂತೆ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಯಾಗಿ, ಪ್ರಧಾನಿ ಹಾಗೂ ಕೇಂದ್ರ ಸಚಿವರ ಎಲ್ಲ ಅಧಿಕೃತ ಪತ್ರಗಳನ್ನು ಮುಚ್ಚಿದ ಲಕೋಟೆಯಲ್ಲಿ ಸ್ವೀಕರಿಸಲಾಗಿದ್ದು, ಅವನ್ನು ರಾಜ್ಯಪಾಲರ ಆಪ್ತ ಕಾರ್ಯದರ್ಶಿಗೆ ಹಸ್ತಾಂತರಿಸಲಾಗಿದೆ ಮತ್ತು ಅಂತಹ ಪತ್ರಗಳನ್ನು ನನ್ನ ಕಚೇರಿಯ ದಾಖಲೆಗಳ ಭಾಗವಾಗಿಸುವುದಿಲ್ಲವಾದ್ದರಿಂದ ಕೋರಿರುವ ಮಾಹಿತಿಯು ನನ್ನ ಬಳಿ ಇಲ್ಲ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿಯು ಪ್ರತಿಕ್ರಿಯಿಸಿದ್ದರು.
ಇದರ ವಿರುದ್ಧ ಸಲ್ಲಿಸಲಾಗಿದ್ದ ಮೇಲ್ಮನವಿಯನ್ನು ಗೋವಾ ಮಾಹಿತಿ ಆಯೋಗವೂ ವಜಾಗೊಳಿಸಿದ್ದು, ಈ ಕುರಿತು ಪ್ರತಿಕ್ರಿಯಿಸಿರುವ ವಕೀಲ ರೋಡ್ರಿಗಸ್, "ಅವರ ಬಳಿ ಪತ್ರಗಳಿವೆ ಎಂಬುದು ವಾಸ್ತವಾಂಶವಾಗಿದೆ. ಹೀಗಾಗಿ ಮಾಹಿತಿ ಆಯೋಗದ ಆದೇಶ ಪ್ರತಿಯು ದೊರೆತ ನಂತರ ಮಾಹಿತಿ ನಿರಾಕರಣೆಯನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗುವುದು" ಎಂದು ತಿಳಿಸಿದ್ದಾರೆ.