ಜಬಲ್ಪುರ: ಹಿಂದಿನ ಕಾಲದಲ್ಲಿ ಋಷಿಗಳು, ಸಾಧು-ಸಂತರಲ್ಲಿ ಕೆಲವರು ನೀರಿನ ಮೇಲೆ ನಡೆದಿರುವುದನ್ನು ಕೇಳಿರುತ್ತೇವೆ. ಇಲ್ಲೊಬ್ಬಳು ಮಹಿಳೆ ನೀರಿನ ಮೇಲೆ ನಡೆದಿದ್ದ ವಿಡಿಯೋ ಕಂಡ ಜನರು ಆಕೆಯನ್ನೇ ದೇವತೆ ಎಂದು ಭಾವಿಸಿದ್ದೂ ನಡೆದಿದೆ. ಅಸಲಿಗೆ ಹತ್ತು ತಿಂಗಳಿಂದ ನಾಪತ್ತೆಯಾಗಿದ್ದ ಆಕೆ ಇದರಿಂದಾಗಿ ಮತ್ತೆ ತನ್ನವರನ್ನು ಸೇರಿಕೊಳ್ಳುವಂತಾಗಿದೆ.
ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ನರ್ಮದಾ ನದಿ ತೀರದಲ್ಲಿ ಇಂಥದ್ದೊಂದು ಪ್ರಸಂಗ ನಡೆದಿದೆ. ಮಹಿಳೆಯೊಬ್ಬಳು ನೀರಿನ ಮೇಲೆ ನಡೆದಿದ್ದ ವಿಡಿಯೋ ಕಂಡ ಜನರು ಆಕೆ ದೇವತೆ ಇರಬಹುದು ಎಂದೇ ಭಾವಿಸಿದ್ದರಂತೆ. ಮಾತ್ರವಲ್ಲ, ಅದಕ್ಕಾಗಿ ಜನರು ನರ್ಮದಾ ನದಿ ತೀರಕ್ಕೆ ಬಂದು ಜಮಾಯಿಸಿದ್ದೂ ನಡೆದಿದೆ. 'ನರ್ಮದಾ ನದಿ ತೀರದ ತಿಲ್ವಾರ ಘಾಟ್ ಬಳಿ ನೀರಿನ ಮೇಲೆ ಮಹಿಳೆ ನಡೆದು ಹೋಗುತ್ತಿರುವುದು' ಎಂಬ ಶೀರ್ಷಿಕೆಯೊಂದಿಗೆ ಈ ವಿಡಿಯೋ ವೈರಲ್ ಹರಿದಾಡಿತ್ತು.
ಬಳಿಕ ಪೊಲೀಸರೂ ಅಲ್ಲಿಗೆ ಧಾವಿಸಿ ಬಂದು ವಿಚಾರಣೆ ನಡೆಸಿದಾಗ ಅದು ಜ್ಯೋತಿ ರಘುವಂಶಿ ಎಂಬಾಕೆ ಎಂದು ತಿಳಿದುಬಂದಿದೆ. ನರ್ಮದಾಪುರಂ ನಿವಾಸಿ ಆಗಿರುವ ಈಕೆ 10 ತಿಂಗಳ ಹಿಂದೆ ಮನೆ ಬಿಟ್ಟು ಬಂದಿರುವುದು ಕೂಡ ಪೊಲೀಸ್ ವಿಚಾರಣೆ ವೇಳೆ ಬಯಲಾಗಿತ್ತು. ತಕ್ಷಣ ಆಕೆಯ ಮನೆಯವರನ್ನು ಸಂಪರ್ಕಿಸಿದ ಪೊಲೀಸರು ಮನೆಯವರಿಗೆ ಒಪ್ಪಿಸಿದ್ದಾರೆ.
ಮಾತ್ರವಲ್ಲ, ಆಕೆ ನೀರಿನ ಮೇಲೆ ನಡೆದಂತೆ ಕಂಡ ದೃಶ್ಯದ ಹಿಂದಿನ ರಹಸ್ಯವೂ ಬಯಲಾಗಿದೆ. ನರ್ಮದಾ ನದಿ ಕೆಲವೆಡೆ ಆಳ ತುಂಬಾ ಕಡಿಮೆ ಇದ್ದು, ಅಂಥ ಕೆಲವು ಜಾಗದಲ್ಲಿ ನಡೆದುಕೊಂಡ ಹೋದಾಗ ನೀರಿನ ಮೇಲೆಯೇ ನಡೆದುಕೊಂಡ ಹೋದ ಹಾಗೆ ಅನಿಸುತ್ತದೆ ಎಂದು ತಿಳಿಸಿದ್ದಾಳೆ. ಭಕ್ತಿಯ ದ್ಯೋತಕವಾಗಿ ನರ್ಮದಾ ಪರಿಕ್ರಮಕ್ಕಾಗಿ ತಾನು ಬಂದಿದ್ದೆ ಎಂದೂ ಆಕೆ ಪೊಲೀಸರಿಗೆ ತಿಳಿಸಿದ್ದಾಳೆ.