ಕಾಸರಗೋಡು: ದೇಶದಲ್ಲಿ ಅಭಿವೃದ್ಧಿ ಕುರಿತು ಚರ್ಚೆ ನಡೆಯುತ್ತಿರುವಾಗ ಕೇರಳದಲ್ಲಿ ಎಡ ಮತ್ತು ಐಕ್ಯರಂಗಗಳು ವಿವಾದಗಳ ಬೆನ್ನುಹತ್ತಿ ರಾಜ್ಯದ ಜನತೆಗೆ ವಂಚನೆಯೆಸಗುತ್ತಿರುವುದಾಗಿ ಬಿಜೆಪಿ ರಾಜ್ಯ ಕಾರ್ಯದರ್ಶಿ ಅಡ್ವ.ಕೆ.ಪಿ.ಪ್ರಕಾಶ್ ಬಾಬು ತಿಳಿಸಿದ್ದಾರೆ.
ಅವರು ಬಿಜೆಪಿ ಕಾಸರಗೋಡು ಜಿಲ್ಲಾ ಕಚೇರಿಯ ಸಭಾಂಗಣದಲ್ಲಿ ನಡೆದ ಜಿಲ್ಲಾ ನಾಯಕತ್ವ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಆರು ದಶಕಗಳ ಆಡಳಿತದ ನಂತರ, ಉಭಯ ರಂಗಗಳು ಎಲ್ಲ ವಲಯದಲ್ಲೂ ವೈಫಲ್ಯ ಕಂಡುಕೊಂಡಿದ್ದು, ಇದುವರೆಗೆ ಅಲ್ಪಸಂಖ್ಯಾತರ ಓಟ್ ಬ್ಯಾಂಕ್ ರಾಜಕಾರಣದ ಬಲದ ಮೇಲೆ ಮುನ್ನಡೆ ಸಾಧಿಸಿಕೊಂಡು ಬಂದಿದೆ. ಕೇರಳದ ಎರಡು ಪ್ರಬಲ ಅಲ್ಪಸಂಖ್ಯಾತ ಸಮುದಾಯಗಳು ರಾಜ್ಯದ ಉಭಯ ರಂಗಗಳ ವೈಫಲ್ಯವನ್ನು ಗುರುತಿಸಿಕೊಂಡಿರುವುದನ್ನು ಕಾಲವೇ ಸಾಬೀತುಪಡಿಸಿದೆ. ಬಿಜೆಪಿ ಕ್ರಿಶ್ಚಿಯನ್ನರನ್ನು ಸ್ವಾಗತಿಸುವಾಗ ಎಡ ಮತ್ತು ಬಲ ರಂಗಗಳು ಏಕೆ ಅಸಮಾಧಾನಗೊಳ್ಳುತ್ತಿವೆ ಎಂಬುದನ್ನು ಅರ್ಥಮಾಡಿಕೊಳ್ಳುವ ಬುದ್ಧಿವಂತಿಕೆ ಕೇರಳದ ಜನತೆಗಿದೆ ಎಂದು ಅವರು ಹೇಳಿದರು. ಭ್ರಷ್ಟಾಚಾರ ಮತ್ತು ಸ್ವಜನಪಕ್ಷಪಾತದ ಎರಡು ರಂಗಗಳು ಪರಸ್ಪರ ಸಹಕಾರದ ಮೂಲಕ ರಾಜ್ಯವನ್ನು ಕೊಳ್ಳೆಹೊಡೆಯುತ್ತಿದೆ. ಅವರ ಪ್ರಕಾರ ಕೇರಳವನ್ನು ಭಾರತದಲ್ಲಿ ಧಾರ್ಮಿಕ ಭಯೋತ್ಪಾದನೆಯ ಕೇಂದ್ರವನ್ನಾಗಿ ಮಾಡಿದವರನ್ನು ಕಾಲ ಕ್ಷಮಿಸುವುದಿಲ್ಲ ಎಂದು ತಿಳಿಸಿದರು. ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷ ರವಿಶತಂತ್ರಿ ಕುಂಟಾರು ಅಧ್ಯಕ್ಷ ತೆ ವಹಿಸಿದ್ದರು. ರಾಷ್ಟ್ರೀಯ ಸಮಿತಿಯ ಸದಸ್ಯರಾದ ಪ್ರಮೀಳಾ ಸಿ.ನಾಯ್ಕ್, ಎಂ.ಸಂಜೀವ ಶೆಟ್ಟಿ, ಉತ್ತರ ವಲಯ ಕಾರ್ಯದರ್ಶಿ ಪಿ.ಸುರೇಶಕುಮಾರ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಎ.ವೇಲಾಯುಧನ್, ವಿಜಯಕುಮಾರ್ ರೈ ಉಪಸ್ಥಿತರಿದ್ದರು.
ಅಭಿವೃದ್ಧಿ ಮರೆತಿರುವ ಉಭಯರಂಗಗಳಿಂದ ಕೇರಳದ ಜನತೆಗೆ ವಂಚನೆ-ಬಿಜೆಪಿ
0
ಏಪ್ರಿಲ್ 15, 2023