ಮುಂಬೈ: ಆಯಪಲ್ ಕಂಪನಿಯ ಭಾರತದಲ್ಲಿನ ಮೊದಲ ಅಧಿಕೃತ ಮಳಿಗೆ 'ಆಯಪಲ್ ಬಿಕೆಸಿ' ಮುಂಬೈನಲ್ಲಿ ಮಂಗಳವಾರ ಅನಾವರಣಗೊಂಡಿತು.
ಸ್ವತಃ ಆಯಪಲ್ ಕಂಪನಿ ಸಿಇಒ ಟಿಮ್ ಕುಕ್ ಅವರು ಈ ಕಾರ್ಯಕ್ರಮಕ್ಕೆ ಆಗಮಿಸಿ ಮಳಿಗೆಯನ್ನು ಗ್ರಾಹಕರೊಂದಿಗೆ ಅನಾವರಣ ಮಾಡಿದರು.ಉದ್ಘಾಟನೆ ಕಾರ್ಯಕ್ರಮಕ್ಕೆ ಯಾವುದೇ ಉದ್ಯಮಿ ಗಣ್ಯರು, ರಾಜಕಾರಣಿಗಳು ಭಾಗವಹಿಸದಿದ್ದದ್ದು ವಿಶೇಷವಾಗಿತ್ತು.
ಈ ವೇಳೆ ಟಿಮ್ ಕುಕ್ ಅವರಿಗೆ ಬಹುದೊಡ್ಡ ಆಶ್ಚರ್ಯ ಕಾದಿತ್ತು. ಆಯಪಲ್ ಗ್ರಾಹಕರೊಬ್ಬರು 1984ರಲ್ಲಿ ತಾವು ಬಳಸುತ್ತಿದ್ದ 'ಐಮ್ಯಾಕ್ ಮ್ಯಾಂಕಿಟೋಸ್ ಎಸ್‌ಇ ಕಂಪ್ಯೂಟರ್' ಅನ್ನು ಮಳಿಗೆಗೆ ತಂದು ಟಿಮ್ ಕುಕ್ ಎದುರು ತೋರಿಸಿದರು.
ಈ ವೇಳೆ ಅತೀ ಆಶ್ಚರ್ಯ ಹಾಗೂ ಸಂತೋಷ ವ್ಯಕ್ತಪಡಿಸಿದ ಟಿಮ್ ಕುಕ್, ಆಯಪಲ್ ಕಂಪನಿಯ ಮೊದಲ ಕಂಪ್ಯೂಟರ್ ನೋಡಿ ಪುಳಕಗೊಂಡರು. ಅನೇಕ ಟೆಕ್ಕಿಗಳು ಟಿಮ್ ಅವರು ತಮ್ಮ ಜೀವಮಾನದಲ್ಲೇ ಸಾರ್ವಜನಿಕ ಜೀವನದಲ್ಲಿ ಇಷ್ಟೊಂದು ಆಶ್ಚರ್ಯವ್ಯಕ್ತಪಡಿಸಿ ಸಂತೋಷಗೊಂಡಿದ್ದು ಇದೇ ಮೊದಲು ಎಂದು ಟ್ವಿಟರ್‌ನಲ್ಲಿ ಹೇಳಿದ್ದಾರೆ.
ಈ ಅಪರೂಪದ ಹಾಗೂ ಸುಸ್ಥಿತಿಯಲ್ಲಿದ್ದ ಆಯಪಲ್ ಕಂಪ್ಯೂಟರ್ ಅನ್ನು ಗೋರೆಗಾಂವ್‌ನ ಸಾಜಿದ್ ಮೋಯಿನುದ್ದೀನ್ ಅವರು ತಂದಿದ್ದರು. ಸಾಜಿದ್ ಅವರನ್ನು ಟಿಮ್ ಕುಕ್ ಅಭಿನಂದಿಸಿ ಫೋಟೊಕ್ಕೆ ಪೋಸ್ ಕೊಟ್ಟರು.
ಮಳಿಗೆ ಉದ್ಘಟಿಸಿ ಮಾತನಾಡಿದ್ದ ಕುಕ್ ಅವರು, ಮುಂಬೈ ಅದ್ಭುತ ಜನರನ್ನು ಹೊಂದಿರುವ ಒಂದು ಅದ್ಭುತ ನಗರ ಎಂದು ಬಣ್ಣಿಸಿದ್ದಾರೆ.
ಈ ಸ್ಟೋರ್ ಅನ್ನು ಶೇ 100 ರಷ್ಟು ನವೀಕರಿಸಬಹುದಾದ ಸಂಪನ್ಮೂಲಗಳಿಂದ ನಿರ್ಮಾಣ ಮಾಡಲಾಗಿದೆ. ಗ್ರಾಹಕರಿಗೆ ಅತ್ಯುನ್ನತ ಅನುಭವ ನೀಡುವ ಸಲುವಾಗಿ ಅತ್ಯಾಧುನಿಕವಾಗಿ ಮಳಿಗೆಯನ್ನು ಡಿಸೈನ್ ಮಾಡಲಾಗಿದ್ದು, ಪ್ರವೇಶ ದ್ವಾರದಲ್ಲಿ 'ಹಲೋ ಮುಂಬೈ' ಎಂದು ಬರೆಯಲಾಗಿದೆ. ಮುಂಬೈ ರೈಸಿಂಗ್ ಕಾರ್ಯಕ್ರಮದ ಮೂಲಕ ಸ್ಟೋರ್ ತೆರೆದುಕೊಂಡಿತು.
ವಿಶೇಷವೆಂದರೆ ಈ ಮಳಿಗೆಯಲ್ಲಿ 20 ಭಾಷೆ ಮಾತನಾಡುವ 100 ಜನ ಸೇವಾ ಪ್ರತಿನಿಧಿಗಳಿದ್ದಾರೆ. ಈ ಮಳಿಗೆಯಲ್ಲಿ ಭಾರತದಲ್ಲಿ ಆಯಪಲ್‌ನ ಗಮನಾರ್ಹ ವ್ಯಾಪಾರ ವಿಸ್ತರಣೆಯನ್ನು ಸೂಚಿಸುತ್ತಿದ್ದು, ಗ್ರಾಹಕರಿಗೆ ಹೊಸತನ, ಅಸಾಧಾರಣ ಸೇವೆ, ಅನುಭವ ಪಡೆಯಲು ಮತ್ತು ಉತ್ಪನ್ನಗಳ ಖರೀದಿಗೆ ಅವಕಾಶ ಮಾಡಿಕೊಡಲಿದೆ. ಏಪ್ರಿಲ್ 20 ರಂದು ದೆಹಲಿಯಲ್ಲಿ ಆಯಪಲ್ ಸಾಕೇತ್ ಮಳಿಗೆ ಅನಾವರಣಗೊಳ್ಳಲಿದೆ.