ನವದೆಹಲಿ: ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಲಾದ ಅರ್ಜಿಗಳ ಪರ ವಾದವನ್ನು ಆಲಿಸಿದ ಸುಪ್ರೀಂ ಕೋರ್ಟ್ ಸಿಜೆಐ ಡಿವೈ ಚಂದ್ರಚೂಡ್ ಅವರು ಮದುವೆಗೆ ಎರಡು ಲಿಂಗಕ್ಕೆ ಸೇರಿದ ಇಬ್ಬರು ಸಂಗಾತಿಗಳು ಅಗತ್ಯವೇ ಎಂದು ಪ್ರಶ್ನಿಸಿದರು.
ನಾವು ಈ ಸಲಿಂಗ ಸಂಬಂಧಗಳನ್ನು ಕೇವಲ ದೈಹಿಕ ಸಂಬಂಧಗಳಾಗಿ ನೋಡುತ್ತೇವೆ. ಆದರೆ ಅಲ್ಲಿ ಹೆಚ್ಚು ಸ್ಥಿರವಾದ, ಭಾವನಾತ್ಮಕ ಸಂಬಂಧವೂ ಇರುತ್ತದೆ. ಸಲಿಂಗ ವಿವಾಹವನ್ನು ಕಾನೂನಾತ್ಮಕವಾಗಿ ಮಾಡುವುದಕ್ಕೆ ನಾವು ವಿವಾಹದ ಕಲ್ಪನೆಯನ್ನು ಮರುವ್ಯಾಖ್ಯಾನಿಸಬೇಕು. ಮದುವೆಯಾಗುವುದಕ್ಕೆ ಎರಡು ಭಿನ್ನ ಲಿಂಗಕ್ಕೆ ಸೇರಿದವರು ಅಗತ್ಯವೇ ಎಂದು ಐವರು ನ್ಯಾಯಾಧೀಶರ ಪೀಠದ ನೇತೃತ್ವ ವಹಿಸಿರುವ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್ ಅವರು ಕೇಳಿದ್ದಾರೆ.
ಈ ವಿಷಯವನ್ನು ಕಾಲಮಿತಿಯಲ್ಲಿ ಮುಗಿಸುವ ಅಗತ್ಯವನ್ನು ಸುಪ್ರೀಂ ಕೋರ್ಟ್ ಒತ್ತಿಹೇಳಿದ್ದು ಇತರ ಪ್ರಕರಣಗಳು ವಿಚಾರಣೆಗೆ ಕಾಯುತ್ತಿವೆ ಎಂದು ನ್ಯಾಯಪೀಠ ಹೇಳಿದೆ.
ಸಲಿಂಗ ವಿವಾಹಗಳಿಗೆ ಕಾನೂನು ಮಾನ್ಯತೆ ಕೋರಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆಯಲ್ಲಿ ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳನ್ನು ಕಕ್ಷಿದಾರರನ್ನಾಗಿ ಮಾಡಬೇಕು ಎಂದು ಕೇಂದ್ರವು ಸುಪ್ರೀಂ ಕೋರ್ಟ್‌ಗೆ ಒತ್ತಾಯಿಸಿದೆ.
ಕಳೆದ ವರ್ಷ ಇಬ್ಬರು ಸಲಿಂಗ ದಂಪತಿಗಳು ತಮ್ಮ ವಿವಾಹದ ಹಕ್ಕನ್ನು ಜಾರಿಗೊಳಿಸಲು ಮತ್ತು ವಿಶೇಷ ವಿವಾಹ ಕಾಯ್ದೆಯಡಿ ತಮ್ಮ ವಿವಾಹಗಳನ್ನು ನೋಂದಾಯಿಸಲು ಸಂಬಂಧಿಸಿದ ಅಧಿಕಾರಿಗಳಿಗೆ ನಿರ್ದೇಶನವನ್ನು ಕೋರಿ ಸಲ್ಲಿಸಿದ ಪ್ರತ್ಯೇಕ ಮನವಿಗಳಿಗೆ ಕೇಂದ್ರದ ಪ್ರತಿಕ್ರಿಯೆಯನ್ನು ಸುಪ್ರೀಂ ಕೋರ್ಟ್ ಕೇಳಿತ್ತು.