ತಿರುವನಂತಪುರ: ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಸಂಚಾರವನ್ನು ಮಂಗಳೂರಿನವರೆಗೂ ವಿಸ್ತರಿಸಬೇಕು ಎಂದು ಕೇರಳದ ಯುಡಿಎಫ್ ನೇತೃತ್ವದ ವಿರೋಧ ಪಕ್ಷಗಳು ಕೇಂದ್ರ ರೈಲ್ವೆ ಸಚಿವಾಲಯವನ್ನು ಭಾನುವಾರ ಒತ್ತಾಯಿಸಿವೆ.
ರೈಲಿನ ಸಂಚಾರವನ್ನು ಮಂಗಳೂರಿನವರೆಗೆ ವಿಸ್ತರಿಸಿದರೆ ಕಾಸರಗೋಡು ಜಿಲ್ಲೆಯ ಜನರಿಗೂ ಅದರ ಪ್ರಯೋಜನ ಲಭಿಸಲಿದೆ ಎಂದು ಸಚಿವಾಲಯಕ್ಕೆ ಬರೆದಿರುವ ಪತ್ರದಲ್ಲಿ ಕೇರಳ ವಿಧಾನಸಭೆಯ ವಿರೋಧ ಪಕ್ಷದ ನಾಯಕ ವಿ.ಡಿ.ಸತೀಶನ್ ಉಲ್ಲೇಖಿಸಿದ್ದಾರೆ.
'ವಂದೇ ಭಾರತ್ ತಿರುವನಂತಪುರದಿಂದ ಕಣ್ಣೂರುವರೆಗೆ ಮಾತ್ರ ಚಲಿಸುತ್ತದೆ ಎಂಬುದಾಗಿ ಮಾಧ್ಯಮಗಳು ವರದಿ ಮಾಡಿವೆ' ಎಂದೂ ಅವರು ಹೇಳಿದ್ದಾರೆ.
'ರಾಜ್ಯದ ರೈಲ್ವೆ ವ್ಯವಸ್ಥೆಗೆ ಕಾಸರಗೋಡು ಕೂಡ ಸೇರಿದೆ. ಈ ಜಿಲ್ಲೆಯನ್ನು ಕೈಬಿಟ್ಟಿರುವುದು ಅಲ್ಲಿನ ಜನರಿಗೆ ಮಾಡಿರುವ ಅನ್ಯಾಯ' ಎಂದೂ ಪತ್ರದಲ್ಲಿ ತಿಳಿಸಿದ್ದಾರೆ.
'ಈ ರೈಲಿನ ಸಂಚಾರವನ್ನು ಮಂಗಳೂರು ರೈಲು ನಿಲ್ದಾಣದ ವರೆಗೆ ವಿಸ್ತರಿಸಿದರೆ ರಾಜ್ಯದ ಉತ್ತರದ ತುದಿಯಿಂದ ದಕ್ಷಿಣದ ತುದಿವರೆಗಿನ ಪ್ರದೇಶಗಳಿಗೆ ತ್ವರಿತ ಸಂಪರ್ಕ ಸಾಧ್ಯ' ಎಂದಿದ್ದಾರೆ.