ನವದೆಹಲಿ: ಭೋಪಾಲ್- ನವದೆಹಲಿ ನಡುವೆ ಸಂಚರಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಗಂಟೆಗೆ 161 ಕಿ.ಮೀ ವೇಗದಲ್ಲಿ ಚಲಿಸಿ ತನ್ನ ವೇಗದ ಮಿತಿಯನ್ನು ಮೀರಿದೆ.
11ನೇ ವಂದೇ ಭಾರತ್ ಎಕ್ಸ್‌ಪ್ರೆಸ್ ಆದ ಈ ರೈಲಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ಚಾಲನೆ ನೀಡಿದ್ದರು.
'ಪ್ರಸ್ತುತ, ವಂದೇ ಭಾರತ್ ರೈಲಿನ ನಿರೀಕ್ಷಿತ ವೇಗದ ಮಿತಿ ಗಂಟೆಗೆ 160 ಕಿ.ಮೀ ಆಗಿದೆ. ಆದರೆ, ಸಾಮಾನ್ಯವಾಗಿ ಈ ರೈಲುಗಳು ಗಂಟೆಗೆ ಸರಾಸರಿ 100 ಕಿ.ಮೀ ವೇಗದಲ್ಲಿ ಸಂಚರಿಸುತ್ತವೆ. ಭೋಪಾಲ್- ನವದೆಹಲಿ ರೈಲು ಆಗ್ರಾದ ರಾಜಾ ಕಿ ಮಂಡಿ ಮತ್ತು ಮಥುರಾದ ನಡುವೆ ಗಂಟೆಗೆ 161 ಕಿ.ಮೀ ವೇಗದಲ್ಲಿ ಚಲಿಸಿದೆ' ಎಂದು ಅಧಿಕಾರಿಗಳು ತಿಳಿಸಿದರು.
ಆಗ್ರಾ ಕಂಟೋನ್ಮೆಂಟ್ ಮತ್ತು ನಿಜಾಮುದ್ದೀನ್ ರೈಲು ನಿಲ್ದಾಣಗಳ ನಡುವಿನ ಹಳಿಯನ್ನು ವಂದೇ ಭಾರತ್ ರೈಲಿನ ವೇಗದ ಮಿತಿಗೆ ಸರಿಹೊಂದುವ ರೀತಿಯಲ್ಲಿ ವಿನ್ಯಾಸಗೊಳಿಸಲಾಗಿದೆ.
ಭೋಪಾಲ್- ನವದೆಹಲಿ ನಡುವಿನ ಶತಾಬ್ದಿ ಎಕ್ಸ್‌ಪ್ರೆಸ್‌ಗೆ ಹೋಲಿಕೆ ಮಾಡಿದರೆ, ವಂದೇ ಭಾರತ್ ಪ್ರಯಾಣದ ಸಮಯವನ್ನು ಸುಮಾರು ಒಂದು ಗಂಟೆ ಕಡಿಮೆ ಮಾಡುತ್ತದೆ.