ನವದೆಹಲಿ: ಪ್ರತಿಪಕ್ಷಗಳ ಮುಖಂಡರ ಸಭೆಯನ್ನು ದೆಹಲಿಗೆ ಬದಲು ಪಟ್ನಾದಲ್ಲೇ ಕರೆಯಿರಿ ಎಂದು ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ, ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರಿಗೆ ನೀಡಿರುವ ಸಲಹೆ ಕಾಂಗ್ರೆಸ್ ಪಕ್ಷಕ್ಕೆ ಆಶಾದಾಯಕ ಬೆಳವಣಿಗೆಯಲ್ಲ.
ಪ್ರತಿಪಕ್ಷಗಳನ್ನು ಒಗ್ಗೂಡಿಸುವ ಯತ್ನ ಎನ್ನಲಾಗಿದ್ದ ಕೋಲ್ಕತ್ತ ಸಭೆ ಬಳಿಕ ಮಮತಾ ಬ್ಯಾನರ್ಜಿ, 'ಒಟ್ಟಾಗಿ ಹೋರಾಟ ನಡೆಸಲು ಪ್ರತಿಪಕ್ಷಗಳಿಗೆ ಯಾವುದೇ ಪ್ರತಿಷ್ಠೆ ಇಲ್ಲ. ಮೋದಿ ನೇತೃತ್ವದ ಬಿಜೆಪಿ ಸೋಲಿಸಲು ಎಲ್ಲ ಪಕ್ಷಗಳು ಒಗ್ಗೂಡಿ ಕಾರ್ಯನಿರ್ವಹಿಸಲಿವೆ' ಎಂದು ಹೇಳಿಕೆ ನೀಡಿದ್ದರು.
ಅದೇ ವೇಳೆ ಅವರು 'ಮೈತ್ರಿಯ ಮುಂದಿನ ಹೆಜ್ಜೆ ಚರ್ಚೆಗೆ ಪಟ್ನಾದಲ್ಲೇ ಎಲ್ಲ ಪಕ್ಷಗಳ ಸಭೆ ನಡೆಸಬೇಕು' ಎಂದು 'ಮನವಿ'ಯನ್ನು ಮಾಡಿದರು. ಇದಕ್ಕೆ ಅವರು, 'ತುರ್ತುಪರಿಸ್ಥಿತಿ ಜಾರಿ ಹಾಗೂ ಆ ನಂತರ ಇಂದಿರಾಗಾಂಧಿ ನೇತೃತ್ವದ ಕಾಂಗ್ರೆಸ್ ಸರ್ಕಾರದ ಪದಚ್ಯುತಿಗೆ ಕಾರಣವಾಗಿದ್ದ ಜೆ.ಪಿ ಆಂದೋಲನವು ಬಿಹಾರದಿಂದಲೇ ಆರಂಭವಾಗಿತ್ತು' ಎಂದು ಕಾರಣವನ್ನು ನೀಡಿದ್ದರು.
'ಮೊದಲು ನಾವು ಒಗ್ಗೂಡಿದ್ದೇವೆ ಎಂಬ ಸಂದೇಶ ರವಾನಿಸಬೇಕಿದೆ. ಇದಕ್ಕೆ ನನ್ನ ಆಕ್ಷೇಪಣೆ ಇಲ್ಲ. ಮಾಧ್ಯಮದ ಬೆಂಬಲ, ಸುಳ್ಳುಗಳಿಂದ ಬಿಜೆಪಿ ಬೆಳೆದಿದೆ. ಅದು 'ಶೂನ್ಯ'ವಾಗಬೇಕು' ಎಂದು ಅವರು ನಿತೀಶ್, ಬಿಹಾರದ ಉಪಮುಖ್ಯಮಂತ್ರಿ ತೇಜಸ್ವಿ ಯಾದವ್ ಅವರಿಗೆ ತಿಳಿಸಿದ್ದರು.
ನಿತೀಶ್ ಮತ್ತು ತೇಜಸ್ವಿ ಯಾದವ್ ಅವರು ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ರಾಹುಲ್ ಗಾಂಧಿ ಅವರೊಂದಿಗೆ ಸಭೆ ನಡೆಸಿದ್ದ ಎರಡು ವಾರದ ಬಳಿಕ ನಿತೀಶ್ ಮತ್ತು ಮಮತಾ ಅವರ ಸಭೆ ನಡೆದಿದೆ. ವಿರೋಧಪಕ್ಷಗಳ ಮೈತ್ರಿಕೂಟದಲ್ಲಿ ನಿರ್ಣಾಯಕ ಪಾತ್ರ ವಹಿಸಲು ಬಯಸಿರುವ ನಿತೀಶ್ ಅವರು, ಕಾಂಗ್ರೆಸ್ ಬಗ್ಗೆ ಒಲವಿಲ್ಲದ ತೃಣಮೂಲ ಕಾಂಗ್ರೆಸ್ ಅಂತಹ ಪಕ್ಷಗಳ ಬೆಂಬಲ ಗಳಿಸಲೂ ಒತ್ತು ನೀಡುತ್ತಿದ್ದಾರೆ.
ಆದರೆ, ಪಟ್ನಾದಲ್ಲೇ ಸಭೆ ನಡೆಯಲಿ ಎಂಬ ಮಮತಾ ಅವರ ಬೇಡಿಕೆ ಹಾಗೂ ಜೆಪಿ ಆಂದೋಲನದ ಉಲ್ಲೇಖ, ಕಾಂಗ್ರೆಸ್ ಅನ್ನು ಕುಗ್ಗಿಸುವುದು ಹಾಗೂ ವಿರೋಧಪಕ್ಷಗಳ ಮೈತ್ರಿ ರಚಿಸುವಾಗ ನನ್ನ ಮಾತಿಗೂ ಮನ್ನಣೆ ನೀಡಬೇಕು ಎಂಬ ಸಂದೇಶ ರವಾನಿಸುವುದೇ ಆಗಿದೆ ಎಂದು ಹೇಳಲಾಗಿದೆ.
ಈ ಹೇಳಿಕೆ ಮೂಲಕ ಅವರು ಎನ್‌ಸಿಪಿ ನಾಯಕ ಶರದ್ ಪವಾರ್ ಅವರಿಗೂ ಸಂದೇಶ ರವಾನಿಸಿದ್ದಾರೆ ಎನ್ನಲಾಗಿದೆ. ಕಳೆದ ವರ್ಷ ನಡೆದ ರಾಷ್ಟ್ರಪತಿ ಸ್ಥಾನದ ಚುನಾವಣೆ ಬಳಿಕ ಮಮತಾ ಅವರು ಶರದ್ ಪವಾರ್ ಅವರಿಂದಲೂ ಅಂತರ ಕಾಯ್ದುಕೊಳ್ಳುತ್ತಿದ್ದಾರೆ. ಪ್ರತಿಪಕ್ಷಗಳ ಮೈತ್ರಿಯ ನಾಯಕತ್ವ ವಹಿಸುವಂತೆ ಸಲಹೆ ಮಾಡಿದಾಗ ಪವಾರ್ ಹಿಂಜರಿದರು ಎಂಬುದು ಇದಕ್ಕೆ ಕಾರಣ ಎನ್ನಲಾಗಿದೆ.
ಮಾನಹಾನಿ ಪ್ರಕರಣದಲ್ಲಿ ಕೋರ್ಟ್ ರಾಹುಲ್ ಗಾಂಧಿ ಅವರಿಗೆ ಶಿಕ್ಷೆ ವಿಧಿಸಿದಾಗ ತೃಣಮೂಲ ಪಕ್ಷ ಮೌನ ವಹಿಸಿತ್ತು. ಆದರೆ, ಅವರ ಸಂಸದ ಸ್ಥಾನ ರದ್ದುಗೊಂಡ ಬಳಿಕ ಧೋರಣೆ ಬದಲಿಸಿತ್ತು. ಅದೇ ವೇಳೆ ಎಐಸಿಸಿ ಅಧ್ಯಕ್ಷ ಖರ್ಗೆ ಅವರು ಕರೆದಿದ್ದ ವಿರೋಧಪಕ್ಷಗಳ ಸಭೆ ಮತ್ತು ಪ್ರತಿಭಟನೆಗೆ ಹಿರಿಯರ ಬದಲು, ಕಿರಿಯ ಮುಖಂಡರನ್ನು ಕಳುಹಿಸುವ ಮೂಲಕ ಮಮತಾ ಕಾಂಗ್ರೆಸ್‌ಗೆ ತನ್ನದೇ ಸಂದೇಶ ರವಾನಿಸಿದ್ದರು.