ತಿರುವನಂತಪುರ: ಸುಡಾನ್ ರಾಜಧಾನಿ ಖಾರ್ಟೂಮ್‌ನಲ್ಲಿ ಸೇನೆ ಹಾಗೂ ಅರೆಸೇನಾ ಪಡೆಗಳ ನಡುವೆ ನಡೆದ ಸಂಘರ್ಷದಲ್ಲಿ ಗುಂಡಿನ ಹೊಡೆತಗಳಿಂದ ಗಾಯಗೊಂಡು ಭಾರತದ ವ್ಯಕ್ತಿಯೊಬ್ಬರು ಸಾವನ್ನಪ್ಪಿದ್ದು, ಅವರ ಕುಟುಂಬಕ್ಕೆ ಎಲ್ಲಾ ನೆರವು ನೀಡಲಾಗುವುದು ಎಂದು ಕೇಂದ್ರ ಸರ್ಕಾರ ಹೇಳಿದೆ.
ಮೃತಪಟ್ಟ ಆಲ್ಬರ್ಟ್ ಅಗಸ್ಟಿನ್ ಕೇರಳದ ಕಣ್ಣೂರು ಜಿಲ್ಲೆಯವರು. ಅವರ ಕುಟುಂಬಕ್ಕೆ ಅಗತ್ಯವಿರುವ ಎಲ್ಲ ಸಹಾಯವನ್ನು ಒದಗಿಸಲಾಗುವುದು, ಮೃತದೇಹವನ್ನು ದೇಶಕ್ಕೆ ತರಲು ಈಗಾಗಲೇ ಕ್ರಮ ಕೈಗೊಳ್ಳಲಾಗಿದೆ ಎಂದು ಕೇಂದ್ರ ವಿದೇಶಾಂಗ ವ್ಯವಹಾರಗಳ ರಾಜ್ಯ ಸಚಿವ ವಿ.ಮುರಳೀಧರನ್ ಹೇಳಿದ್ದಾರೆ. ಈ ಬಗ್ಗೆ ಆಲ್ಬರ್ಟ್ ಅವರ ತಂದೆಯೊಂದಿಗೆ ಸಚಿವರು ಮಾತನಾಡಿದ್ದಾರೆ ಎಂದು ಸರ್ಕಾರ ಭಾನುವಾರ ತಿಳಿಸಿದೆ.
ಸುಡಾನ್‌ನಲ್ಲಿ ಮೃತ ಅಗಸ್ಟಿನ್ ಜತೆಗಿದ್ದ ಅವರ ಪತ್ನಿ ಮತ್ತು ಮಗಳು ಸುರಕ್ಷಿತವಾಗಿದ್ದಾರೆ ಎಂದೂ ಸಚಿವರು ಹೇಳಿದರು.
'ಖಾರ್ಟೂಮ್‌ನಲ್ಲಿ ಸೈನಿಕರ ನಡುವೆ ಗುಂಡಿನ ಚಕಮಕಿ ನಡೆಯುತ್ತಿದ್ದಾಗ ಅಗಸ್ಟಿನ್ ಅವರು ತಮ್ಮ ಮನೆಯೊಳಗಿದ್ದರು. ಧುತ್ತನೆ ಹೊರಗಿನಿಂದ ಎರಗಿದ ಗುಂಡಿನಿಂದ ಅವರು ತೀವ್ರವಾಗಿ ಗಾಯಗೊಂಡರು. ಸುಡಾನ್‌ನಲ್ಲಿ ಅಗಸ್ಟಿನ್ ಅವರು ಡಾಲ್ ಗ್ರೂಪ್ ಎಂಬ ಕಂಪನಿಯಲ್ಲಿ ಕೆಲಸದಲ್ಲಿದ್ದರು' ಎಂದು ಮೃತರ ಸಂಬಂಧಿ ತಿಳಿಸಿದ್ದಾರೆ.
ಸುಡಾನ್‌ನಲ್ಲಿ ಸುಮಾರು 4,000 ಭಾರತೀಯರಿದ್ದು, ಅವರಲ್ಲಿ 1,200ರಷ್ಟು ಜನರು ದಶಕಗಳ ಹಿಂದೆಯೇ ಇಲ್ಲಿ ನೆಲೆನಿಂತಿದ್ದಾರೆ.
ಅಕ್ಟೋಬರ್ 2021ರ ದಂಗೆಯಲ್ಲಿ ಸುಡಾನ್‌ನ ಮಿಲಿಟರಿ ಇಲ್ಲಿನ ಅಧಿಕಾರವನ್ನು ವಶಪಡಿಸಿಕೊಂಡಿತು. ಅಂದಿನಿಂದ ಇಲ್ಲಿ ಸೇನೆ ಮಂಡಳಿಯ ಮೂಲಕ ದೇಶದ ಆಡಳಿತ ನಡೆಸುತ್ತಿದೆ. ನಾಗರಿಕ ಸರ್ಕಾರಕ್ಕೆ ಅಧಿಕಾರ ಹಸ್ತಾಂತರಿಸುವ ಉದ್ದೇಶಿತ ಕಾಲಮಿತಿ ಕುರಿತು ಸೇನೆ ಮತ್ತು ಅರೆಸೇನಾಪಡೆ ನಡುವೆ ವಿವಾದ ಉಂಟಾಗಿದ್ದು, ಏ.15ರಿಂದ ಈ ಎರಡೂ ಕಡೆಯ ಸೈನಿಕರ ನಡುವೆ ಗುಂಡಿನ ಕಾಳಗ ತೀವ್ರಗತಿ ಪಡೆದುಕೊಂಡಿದೆ.