HEALTH TIPS

ಐಟಿ ನಿಯಮಗಳಿಗೆ ತಿದ್ದುಪಡಿ ಹಿಂಪಡೆಯಲು ಐಎನ್‌ಎಸ್‌ ಆಗ್ರಹ

 

             ನವದೆಹಲಿ: ಮಾಹಿತಿ ತಂತ್ರಜ್ಞಾನ (ಮಧ್ಯವರ್ತಿ ಮಾರ್ಗಸೂಚಿಗಳು ಮತ್ತು ಡಿಜಿಟಲ್ ಮಾಧ್ಯಮ ನೀತಿಸೂತ್ರಗಳ ಸಂಹಿತೆ) ನಿಯಮಗಳಿಗೆ ತಿದ್ದುಪಡಿ ತರುವ ಕೇಂದ್ರ ಸರ್ಕಾರದ ನಿರ್ಧಾರಕ್ಕೆ ಇಂಡಿಯನ್‌ ನ್ಯೂಸ್‌ಪೇಪರ್‌ ಸೊಸೈಟಿ (ಐಎನ್‌ಎಸ್‌) ಕಳವಳ ವ್ಯಕ್ತಪಡಿಸಿದೆ.

     ಈ ತಿದ್ದುಪಡಿಯು, ಯಾವ ಸುದ್ದಿ ನಕಲಿ, ಯಾವುದು ಅಲ್ಲ ಎಂಬುದನ್ನು ನಿರ್ಧರಿಸುವ ಸಂಪೂರ್ಣ ಅಧಿಕಾರವನ್ನು ಸರ್ಕಾರಕ್ಕೆ ಅಥವಾ ಸರ್ಕಾರದಿಂದ ನಿಯೋಜಿತ ಸಂಸ್ಥೆಗೆ ನೀಡುತ್ತದೆ ಎಂದು ಐಎನ್‌ಎಸ್‌ ಬುಧವಾರ ಬಿಡುಗಡೆ ಮಾಡಿರುವ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದೆ.

                ಐ.ಟಿ ನಿಯಮಗಳಿಗೆ ತಿದ್ದುಪಡಿ ತಂದಿರುವ ಕುರಿತು ಎಲೆಕ್ಟ್ರಾನಿಕ್ಸ್ ಮತ್ತು ಮಾಹಿತಿ ತಂತ್ರಜ್ಞಾನ ಸಚಿವಾಲಯವು ಏಪ್ರಿಲ್ 6ರಂದು ಅಧಿಸೂಚನೆ ಹೊರಡಿಸಿದೆ.

               ಈ ಅಧಿಸೂಚನೆ ಪ್ರಕಾರ, ಸುದ್ದಿಗಳ ಸತ್ಯಾಸತ್ಯತೆಯನ್ನು ಪರಿಶೀಲಿಸುವುದಕ್ಕೆ ಸಂಬಂಧಿಸಿ 'ಫ್ಯಾಕ್ಟ್‌ ಚೆಕಿಂಗ್ ಘಟಕ'ವನ್ನು ಸ್ಥಾಪಿಸುವ ಅಧಿಕಾರವನ್ನು ಸಚಿವಾಲಯ ಹೊಂದಿರುತ್ತದೆ. ಇಂಥ ವಿಷಯವನ್ನೇ ಪ್ರಕಟಿಸಬೇಕು ಅಥವಾ ಪ್ರಕಟಿತ ಸುದ್ದಿ/ಲೇಖನದಲ್ಲಿನ ನಿರ್ದಿಷ್ಟ ಅಂಶವನ್ನು ತೆಗೆದುಹಾಕುವಂತೆ ಈ ಘಟಕವು, ಸಾಮಾಜಿಕ ಮಾಧ್ಯಮಗಳ ವೇದಿಕೆಗಳು, ಇಂಟರ್‌ನೆಟ್‌ ಸೇವೆ ಒದಗಿಸುವ ಸಂಸ್ಥೆಗಳು ಸೇರಿದಂತೆ ಎಲ್ಲ ಮಧ್ಯವರ್ತಿ ಸಂಸ್ಥೆಗಳಿಗೆ ಸೂಚನೆ ನೀಡುವ ಅಧಿಕಾರವನ್ನು ಸಚಿವಾಲಯಕ್ಕೆ ನೀಡುತ್ತದೆ.

                 ಸುದ್ದಿಯೊಂದು ನಕಲಿ ಅಥವಾ ನಿಜ ಎಂಬುದನ್ನು ನಿರ್ಧರಿಸುವ ಅಧಿಕಾರವನ್ನು ಸರ್ಕಾರ ಅಥವಾ ನಿಯೋಜಿತ ಸಂಸ್ಥೆಗೆ ನೀಡುವ ಮುನ್ನ ಸಂಬಂಧಪಟ್ಟ ಪಕ್ಷಗಾರರ ಅಹವಾಲು ಆಲಿಸಿಲ್ಲ. ಹೀಗಾಗಿ, ಇಂಥ ಕ್ರಮವು ದಬ್ಬಾಳಿಕೆ ಎನಿಸಲಿದ್ದು, ಸಹಜ ನ್ಯಾಯ ತತ್ವಗಳ ಉಲ್ಲಂಘನೆಯಾಗಲಿದೆ. ದೂರುದಾರರನ್ನೇ ನ್ಯಾಯ ನಿರ್ಣಯ ಮಾಡುವ ಸ್ಥಾನದಲ್ಲಿ ಕೂಡ್ರಿಸುವುದಕ್ಕೆ ದಾರಿ ಮಾಡಿಕೊಡುತ್ತದೆ ಎಂದು ಐಎನ್‌ಎಸ್‌ ಹೇಳಿದೆ.

              ಸಚಿವಾಲಯವು ಅಧಿಸೂಚನೆಯೊಂದನ್ನು ಪ್ರಕಟಿಸುವ ಮೂಲಕ 'ಫ್ಯಾಕ್ಟ್‌ ಚೆಕಿಂಗ್‌' ಘಟಕವನ್ನು ಸ್ಥಾಪಿಸಲು ಈ ತಿದ್ದುಪಡಿ ಅವಕಾಶ ನೀಡುತ್ತದೆ. ಆದರೆ, ಈ 'ಫ್ಯಾಕ್ಟ್‌ ಚೆಕಿಂಗ್‌' ಘಟಕದ ಕಾರ್ಯವೈಖರಿ, ಅದರ ಮೇಲ್ವಿಚಾರಣೆ ವಿಧಾನದ ಬಗ್ಗೆ ತಿದ್ದುಪಡಿ ಮಾಡಲಾದ ನಿಯಮಗಳಲ್ಲಿ ನಿರ್ದಿಷ್ಟ ವಿವರಣೆಗಳಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದೆ.

              'ಫ್ಯಾಕ್ಟ್‌ ಚೆಕಿಂಗ್‌' ಘಟಕಕ್ಕೆ ಇರುವ ಅಧಿಕಾರ ವ್ಯಾಪ್ತಿ ಏನು? ಮೇಲ್ಮನವಿ ಸಲ್ಲಿಸಲು ಅವಕಾಶ ಇದೆಯೇ? ಎಂಬ ಬಗ್ಗೆ ಸ್ಪಷ್ಟತೆ ಇಲ್ಲ. ಇದು ಮಾಧ್ಯಮಗಳನ್ನು ಪೂರ್ವಪರಿಶೀಲನೆಗೆ (ಸೆನ್ಸಾರ್‌ಶಿಪ್‌) ಒಳಪಡಿಸುವುದಕ್ಕೆ ಸಮವಾಗುವುದು ಎಂದೂ ಐಎನ್‌ಎಸ್‌ ಅಭಿಪ್ರಾಯಪಟ್ಟಿದೆ.

               ಮಾಧ್ಯಮ ವಲಯದಿಂದ ವ್ಯಾಪಕ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ, ಜನವರಿಯಲ್ಲಿ ಪ್ರಕಟಿಸಿದ್ದ ತಿದ್ದುಪಡಿಗಳನ್ನು ಸಚಿವಾಲಯ ಹಿಂಪಡೆದಿತ್ತು. ತಿದ್ದುಪಡಿ ಕುರಿತು ಮಾಧ್ಯಮ ಕಂಪನಿಗಳು ಹಾಗೂ ಸಂಘಟನೆಗಳೊಂದಿಗೆ ಸಮಾಲೋಚನೆ ನಡೆಸುವುದಾಗಿಯೂ ಆಗ ಭರವಸೆ ನೀಡಿತ್ತು. ಆದರೆ, ಇಂಥ ಯಾವುದೇ ಸಮಾಲೋಚನೆ ನಡೆಸದಿರುವುದು ವಿಷಾದಕರ ಎಂದು ಐಎನ್‌ಎಸ್‌ ಹೇಳಿದೆ.

       ಏಪ್ರಿಲ್‌ 6ರಂದು ಪ್ರಕಟಿಸಲಾಗಿರುವ ತಿದ್ದುಪಡಿ ನಿಯಮಗಳಿಗೂ, ಕರಡುವಿನಲ್ಲಿದ್ದ ತಿದ್ದುಪಡಿಗಳು ಯಾವುದೇ ವ್ಯತ್ಯಾಸ ಕಾಣುತ್ತಿಲ್ಲ ಎಂದೂ ಕಳವಳ ವ್ಯಕ್ತಪಡಿಸಿದೆ.

              ಸಂವಿಧಾನದಲ್ಲಿ ವಿವರಿಸಿರುವಂತೆ, ಸಹಜ ನ್ಯಾಯ ತತ್ವಗಳನ್ನು ಎತ್ತಿ ಹಿಡಿಯುವುದು, ವಾಕ್‌ ಸ್ವಾತಂತ್ರ್ಯ ಹಾಗೂ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಖಾತರಿಪಡಿಸುವ ದೃಷ್ಟಿಯಿಂದ, ಸರ್ಕಾರವು ಕೂಡಲೇ ಈ ಅಧಿಸೂಚನೆಯನ್ನು ಹಿಂಪಡೆಯಬೇಕು ಎಂದು ಐಎನ್‌ಎಸ್‌ ಆಗ್ರಹಿಸಿದೆ.

                    ಪತ್ರಿಕಾ ವೃತ್ತಿ ಹಾಗೂ ಅದರ ವಿಶ್ವಾಸಾರ್ಹತೆ ಮೇಲೆ ಗಂಭೀರ ಪರಿಣಾಮ ಬೀರುವ ಯಾವುದೇ ಅಧಿಸೂಚನೆಗಳನ್ನು ಪ್ರಕಟಿಸುವ ಮುನ್ನ ಮಾಧ್ಯಮ ಸಂಸ್ಥೆಗಳು ಸೇರಿದಂತೆ ಸಂಬಂಧಪಟ್ಟ ಭಾಗಿದಾರರ ಜೊತೆ ವ್ಯಾಪಕ ಹಾಗೂ ಅರ್ಥಪೂರ್ಣ ಸಮಾಲೋಚನೆ ನಡೆಸಬೇಕು ಎಂದೂ ಪ್ರಕಟಣೆಯಲ್ಲಿ ಒತ್ತಾಯಿಸಲಾಗಿದೆ.


ಕಾಮೆಂಟ್‌‌ ಪೋಸ್ಟ್‌ ಮಾಡಿ

0 ಕಾಮೆಂಟ್‌ಗಳು
* Please Don't Spam Here. All the Comments are Reviewed by Admin.

Top Post Ad

Click to join Samarasasudhi Official Whatsapp Group

Qries

Qries

Below Post Ad


ಜಾಹಿರಾತು














Qries