ನವದೆಹಲಿ: ಅದಾನಿ ಸಮೂಹಕ್ಕೆ ಚೀನಾ ನಂಟಿದೆ ಎಂಬ ಆರೋಪಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ಪಕ್ಷವು ಕೇಂದ್ರ ಸರ್ಕಾರದ ವಿರುದ್ಧ ಭಾನುವಾರ ವಾಗ್ದಾಳಿ ನಡೆಸಿದೆ.
ಈ ಆರೋಪಗಳಿಗೆ ಸಂಬಂಧಿಸಿ ಮಾಧ್ಯಮಗಳಲ್ಲಿ ಪ್ರಕಟವಾಗಿರುವ ವರದಿಯನ್ನು ಉಲ್ಲೇಖಿಸಿರುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್, 'ಚೀನಾ ಕಂಪನಿಗಳೊಂದಿಗೆ ನಂಟು ಹೊಂದಿದ್ದರು ಕೂಡ ಅದಾನಿ ಸಮೂಹಕ್ಕೆ ದೇಶದ ಕೆಲ ಬಂದರುಗಳ ನಿರ್ವಹಣೆ ಗುತ್ತಿಗೆಯನ್ನು ಏಕೆ ನೀಡಲಾಗಿದೆ' ಎಂದು ಪ್ರಶ್ನಿಸಿದ್ದಾರೆ.
'ತೈವಾನ್‌ನ ವಾನ್ ಹೈ ಲೈನ್ಸ್ ಎಂಬ ಕಂಪನಿಗೆ ಚೀನಾದ ನಂಟಿದೆ ಎಂಬುದು ಪರಿಶೀಲನೆಯಿಂದ ಪತ್ತೆಯಾಗಿತ್ತು. ಹೀಗಾಗಿ, ಎಪಿಎಂ ಟರ್ಮಿನಲ್ಸ್ ಮ್ಯಾನೇಜ್‌ಮೆಂಟ್ ಹಾಗೂ ವಾನ್ ಹೈ ಲೈನ್ಸ್ ಒಳಗೊಂಡ ಒಕ್ಕೂಟಕ್ಕೆ ಸುರಕ್ಷತೆಗೆ ಸಂಬಂಧಿಸಿದ ಅನುಮತಿಯನ್ನು ನೀಡಲು ಸರ್ಕಾರ ಕಳೆದ ವರ್ಷ ನಿರಾಕರಿಸಿತ್ತು' ಎಂಬ ಮಾಧ್ಯಮದ ವರದಿಯನ್ನು ಉಲ್ಲೇಖಿಸಿ, ಜೈರಾಮ್ ರಮೇಶ್ ಅವರು ವಾಗ್ದಾಳಿ ನಡೆಸಿದ್ದಾರೆ.
ಜವಾಹರ್‌ಲಾಲ್ ನೆಹರು ಬಂದರು ಪ್ರಾಧಿಕಾರದ ಟರ್ಮಿನಲ್‌ನಲ್ಲಿ ಕಂಟೇನರ್‌ಗಳ ನಿರ್ವಹಣೆಗೆ ಸಂಬಂಧಿಸಿದ ಗುತ್ತಿಗೆಯನ್ನು ಪಡೆಯಲು ಒಕ್ಕೂಟ ನಡೆಸಿದ್ದ ಪ್ರಯತ್ನಕ್ಕೆ ಸರ್ಕಾರದ ಈ ಕ್ರಮ ಅಡ್ಡಿಯಾಗಿತ್ತು ಎಂದು ಅವರು ಹೇಳಿಕೆಯೊಂದರಲ್ಲಿ ತಿಳಿಸಿದ್ದಾರೆ.
ಚೀನಾದ ಕಂಪನಿಗಳು ಹಾಗೂ ಚೀನಾದೊಂದಿಗೆ ನಂಟು ಹೊಂದಿರುವ ಕಂಪನಿಗಳು ದೇಶದಲ್ಲಿ ಯಾವುದೇ ಬಂದರು ಮತ್ತು ಟರ್ಮಿನಲ್ ನಿರ್ವಹಣೆಯ ಗುತ್ತಿಗೆ ಪಡೆಯದಂತೆ ತಡೆಯುವುದೇ ಸರ್ಕಾರದ ನೀತಿಯಾಗಿದೆ. ಆದರೆ, ಅದಾನಿ ಸಮೂಹಕ್ಕೆ ಚೀನಾದೊಂದಿಗೆ ಇರಬಹುದಾದ ನಂಟು ಈಗ ಹೊಸ ಪ್ರಶ್ನೆಗಳು ಉದ್ಭವಿಸುವಂತೆ ಮಾಡಿದೆ ಎಂದೂ ಅವರು ಟೀಕಿಸಿದ್ದಾರೆ.
ಅದಾನಿ ಸಮೂಹದ ವಿರುದ್ಧದ ಆರೋಪಗಳನ್ನು ಮುಂದಿಟ್ಟುಕೊಂಡು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪ್ರಶ್ನೆ ಕೇಳುವುದನ್ನು ಮುಂದುವರಿಸಿರುವ ಅವರು, 'ಚೀನಾ ಪ್ರಜೆ ಚಾಂಗ್ ಚುಂಗ್-ಲಿಂಗ್ ಅವರು ಅದಾನಿ ಸಮೂಹಕ್ಕೆ ನಿಕಟ ಸಂಪರ್ಕ ಹೊಂದಿದ್ದಾರೆ' ಎಂದು ಆರೋಪಿಸಿದ್ದಾರೆ.
'ಚಾಂಗ್ ಚುಂಗ್-ಲಿಂಗ್ ಅವರ ಪುತ್ರ ಪಿಎಂಸಿ ಪ್ರಾಜೆಕ್ಟ್ಸ್ ಎಂಬ ಕಂಪನಿ ಮಾಲೀಕ. ಈ ಕಂಪನಿಯು ಅದಾನಿ ಸಮೂಹಕ್ಕೆ ಹಲವಾರು ಬಂದರುಗಳು, ಟರ್ಮಿನಲ್‌ಗಳು, ರೈಲು ಮಾರ್ಗಗಳು, ವಿದ್ಯುತ್ ಮಾರ್ಗ ಹಾಗೂ ಇತರ ಮೂಲಸೌಕರ್ಯಗಳನ್ನು ನಿರ್ಮಿಸಿಕೊಟ್ಟಿದೆ' ಎಂದು ಹೇಳಿದ್ದಾರೆ.
'ವಿದ್ಯುತ್ ಉತ್ಪಾದನೆ-ಪೂರೈಕೆ ಉಪಕರಣಗಳಿಗೆ ಸಂಬಂಧಿಸಿ ನಡೆದಿದೆ ಎನ್ನಲಾದ ₹5,500 ಕೋಟಿಯಷ್ಟು ಅವ್ಯವಹಾರದಲ್ಲಿ ಅದಾನಿ ಸಮೂಹ ಹಾಗೂ ಪಿಎಂಸಿ ಪ್ರಾಜೆಕ್ಟ್ಸ್ ಶಾಮೀಲಾಗಿವೆ' ಎಂದು ಅವರು ಆರೋಪಿಸಿದ್ದಾರೆ.
'ಕೆಲ ಬಂದರುಗಳ ಹಿಂದಿನ ಮಾಲೀಕರ ಮೇಲೆ ದಾಳಿಗಳು ನಡೆದಿವೆ. ಆದರೂ, ಅದಾನಿ ಸಮೂಹಕ್ಕೆ ಒಂದಾದ ನಂತರ ಒಂದು ಬಂದರು ಖರೀದಿಗೆ ಯಾಕೆ ಅನುಮತಿ ನೀಡಲಾಗುತ್ತಿದೆ' ಎಂದೂ ಪ್ರಶ್ನಿಸಿದ್ದಾರೆ.