ನವದೆಹಲಿ: ಭಾರತ ಕ್ರಿಕೆಟ್ ತಂಡದ ಯುವ ಬ್ಯಾಟರ್ ಶುಭ್‌ಮನ್ ಗಿಲ್ ಅವರು ಅತ್ಯಂತ ಪ್ರತಿಭಾನ್ವಿತ ಆಟಗಾರರಾಗಿದ್ದು, ದೊಡ್ಡ ಮೊತ್ತದ ರನ್ನುಗಳನ್ನು ಕಲೆ ಹಾಕುವ ಮೂಲಕ ಮುಂದಿನ ದಶಕಗಳಲ್ಲಿ ಕ್ರಿಕೆಟ್ ಜಗತ್ತಿನಲ್ಲಿ ಮೆರೆಯಲಿದ್ದಾರೆ ಎಂದು ಆಸ್ಟ್ರೇಲಿಯದ ಹೆಸರಾಂತ ಮಾಜಿ ಕ್ರಿಕೆಟಿಗ ಮ್ಯಾಥ್ಯು ಹೇಡನ್ ಅವರು ಅಭಿಪ್ರಾಯಪಟ್ಟರು.
ಕೇವಲ 23 ವರ್ಷದ ಗಿಲ್ ಅವರು ಟೆಸ್ಟ್‌ನಲ್ಲಿ 2 ಶತಕ, ಏಕದಿನ 4, ಹಾಗೂ ಟಿ20ಯಲ್ಲಿ 1 ಶತಕಗಳನ್ನು ದಾಖಲಿಸಿದ್ದಾರೆ.
ಗುರುವಾರ ಇಲ್ಲಿ ನಡೆದ ಐಪಿಎಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ ಗುಜರಾತ್ ಟೈಟಾನ್ಸ್ ಆರು ವಿಕೆಟ್‌ಗಳಿಂದ ಗಳಿಸಿದ ಜಯದಲ್ಲಿ ಗಿಲ್ ಮುಖ್ಯ ಪಾತ್ರವಹಿಸಿದರು. ಅವರು 49 ಎಸೆತಗಳಲ್ಲಿ 67 ರನ್ ಗಳಿಸುವುದರ ಮೂಲಕ ಬ್ಯಾಟಿಂಗ್ ಕ್ಲಾಸ್ ತೋರಿಸಿದರು.
'ಗಿಲ್ ಅವರು ಆಟದಲ್ಲಿ ನಿಯಂತ್ರಣ ಸಾಧಿಸಿ ಆಡುವ ಸಾಮರ್ಥ್ಯವು ನನ್ನನ್ನು ಆಕರ್ಷಿಸಿದೆ' ಎಂದೂ ಹೇಡನ್ ಹೇಳಿದರು.
'ಪಂಜಾಬ್ ಕಿಂಗ್ಸ್‌ನ ಶಿಸ್ತುಬದ್ಧ ಬೌಲಿಂಗ್ ದಾಳಿ ಸಂಘಟಿಸಿದರೂ ಗುಜರಾತ್ ಟೈಟನ್ಸ್ 154 ರನ್ ಬೆನ್ನಟ್ಟುವಲ್ಲಿ ಸಫಲವಾಯಿತು. ಟೈಟನ್ಸ್‌ನ ಬ್ಯಾಟಿಂಗ್ ಜವಾಬ್ದಾರಿಯನ್ನು ತೆಗೆದುಕೊಂಡು ಮತ್ತು ಆಳವಾಗಿ ಬ್ಯಾಟ್ ಮಾಡುವಲು ಶುಭಮನ್ ಗಿಲ್ ಅವರೇ ಬೇಕಾಗಿದ್ದರು. ಅವರು ಆಡಿದ ಕೆಲವು ಹೊಡೆತಗಳು ಕಣ್ಣಿಗೆ ಖುಷಿ ಕೊಟ್ಟವು. ಅಂಥ ಕ್ಲಾಸ್ ಆಟಗಾರ ಅವರು. ಮುಂದಿನ ಒಂದು ದಶಕದವರೆಗೆ ವಿಶ್ವ ಕ್ರಿಕೆಟ್‌ನಲ್ಲಿ ಗಿಲ್ ಪ್ರಾಬಲ್ಯ ಸಾಧಿಸಲಿದ್ದಾರೆ' ಹೇಡನ್ ವಿಶ್ವಾಸ ವ್ಯಕ್ತಪಡಿಸಿದರು.
ಗುರುವಾರ ಪಂಜಾಬ್ ಕಿಂಗ್ಸ್ ವಿರುದ್ಧ ಗಿಲ್ ದಾಖಲಿಸಿದ 67 ರನ್‌ಗಳಲ್ಲಿ 7 ಬೌಂಡರಿ ಹಾಗೂ 1 ಸಿಕ್ಸ್ ಕೂಡಿದ್ದವು.