ನಮಗೆ ಎಷ್ಟೇ ವಯಸ್ಸಾದ್ರು ಕೂಡ ಯಂಗ್ ಆಗಿ ಕಾಣಿಸಿಕೊಳ್ಳಬೇಕು ಅನ್ನೋ ಆಸೆ
ಪ್ರತಿಯೊಬ್ಬರಿಗೂ ಇರುತ್ತದೆ. ಇದಕ್ಕಾಗಿ ಸಿಕ್ಕಾಪಟ್ಟೆ ಕ್ರೀಮ್ ಹಚ್ಚಿ, ಸರ್ಜರಿ
ಮಾಡಿಸಿಕೊಳ್ಳುವವರು ಕೂಡ ಇದ್ದಾರೆ. ಆದ್ರೆ ಬೇಸರದ ಸಂಗತಿ ಏನಪ್ಪಾ ಅಂದ್ರೆ ಇತ್ತೀಚಿಗೆ
ಯುವಕ ಹಾಗೂ ಯುವತಿಯರಲ್ಲೂ ಕೂಡ ಮುಖದಲ್ಲಿ ಸುಕ್ಕು ಕಾಣಿಸಿಕೊಳ್ಳುತ್ತಿದೆ. ಅದು ಕೂಡ
ಹದಿಹರೆಯದ ವಯಸ್ಸಿನಲ್ಲಿ ಈ ಲಕ್ಷಣಗಳು ಗೋಚರಿಸ್ತಿದೆ. ಅಷ್ಟಕ್ಕು ಚಿಕ್ಕ ವಯಸ್ಸಿನಲ್ಲಿ
ಮುಖದ ಮೇಲೆ ಸುಕ್ಕು ಕಾಣಿಸೋದಕ್ಕೆ ಕಾರಣವೇನು? ನಾವು ಮಾಡುವ ಯಾವೆಲ್ಲಾ
ಚಟುವಟಿಕೆಗಳಿಂದಾಗಿ ಮುಖದ ಮೇಲೆ ಸುಕ್ಕು ಕಾಣಿಸಿಕೊಳ್ಳುತ್ತದೆ ಅನ್ನೋದನ್ನು ತಿಳಿಯೋಣ.
1. ಅತಿಯಾಗಿ ಸಕ್ಕರೆ ಸೇವನೆ
ಅಧ್ಯಯನಗಳ ಪ್ರಕಾರ ಅತಿಯಾಗಿ ಸಕ್ಕರೆ ಸೇವನೆ ಮಾಡೋದ್ರಿಂದ ನಮ್ಮ ಚರ್ಮದಲ್ಲಿ ವಯಸ್ಸಾದಂತೆ ಕಾಣುವ ಲಕ್ಷಣಗಳು ಬಹು ಬೇಗ ಕಾಣಿಸಿಕೊಳ್ಳುತ್ತಂತೆ.
ನಮ್ಮ ದೇಹದಲ್ಲಿ ಸಕ್ಕರೆಯು ಗ್ಲೈಕೇಶನ್‌ಗೆ ಒಳಗಾಗುತ್ತದೆ. ಗ್ಲೈಕೇಶನ್ ಎಂದರೆ ಇದು
ಸಕ್ಕರೆ ಮತ್ತು ಪ್ರೋಟೀನ್‌ಗಳು ಅಥವಾ ಲಿಪಿಡ್‌ಗಳ ನಡುವಿನ ರಾಸಾಯನಿಕ ಕ್ರಿಯೆಯಾಗಿದೆ.
ಇದು ಪ್ರೋಟೀನ್ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗೂ ಚರ್ಮದ
ಸ್ಥಿತಿಸ್ಥಾಪಕತ್ವವನ್ನು ದುರ್ಬಲಗೊಳಿಸುತ್ತದೆ. ಇದರ ಪರಿಣಾಮವಾಗಿ ಸುಕ್ಕುಗಳು
ಕಾಣಿಸಿಕೊಳ್ಳುತ್ತದೆ.
2. ಅತಿಯಾದ ಒತ್ತಡ
ಈ ಆಧುನಿಕ ಯುಗದಲ್ಲಿ ಪ್ರತಿಯೊಬ್ಬರು ಸ್ಪರ್ಧೆಯ ಹಿಂದೆ ಬಿದ್ದವರೇ ಹೀಗಾಗಿ ಮನುಷ್ಯನ
ಮೇಲೆ ಒತ್ತಡ ಹೆಚ್ಚಾಗುತ್ತದೆ. ಶಾಲೆ, ಕಾಲೇಜಿಗೆ ಹೋಗುವ ಹದಿಹರೆಯದ ಮಕ್ಕಳಲ್ಲಿ ಸುಕ್ಕು
ಕಾಣಿಸಿಕೊಳ್ಳುವುದು ಸಾಮಾನ್ಯವಾಗಿದೆ. ಅತಿಯಾದ ಒತ್ತಡ ಉಂಟಾದಂತಹ ಸಂದರ್ಭದಲ್ಲಿ
ಮೂತ್ರಜನಕಾಂಗದ ಗ್ರಂಥಿಗಳಿಂದ ಬಿಡುಗಡೆಯಾಗುವ ಹಾರ್ಮೋನ್ ಅಕಾಲಿಕ ಚರ್ಮದ ಸುಕ್ಕುಗಳ
ಬೆಳವಣಿಗೆ ಸೇರಿದಂತೆ ದೇಹದಲ್ಲಿ ವಯಸ್ಸಾದ ಲಕ್ಷಣಗಳನ್ನು ತೋರಿಸುತ್ತದೆ.
3. ನಿದ್ದೆಯ ಕೊರತೆ
ಹದಿಹರೆಯದ ವಯಸ್ಸಿನಲ್ಲಿ ಮಕ್ಕಳ ಕೈಗೆ ಮೊಬೈಲ್, ಲ್ಯಾಪ್‌ಟಾಪ್ ಸಿಕ್ಕರೆ ಮಕ್ಕಳು
ಓದೋದನ್ನು ಬಿಟ್ಟು ಈ ಗೆಜೆಟ್‌ಗಳಲ್ಲೇ ಮುಳಗಿ ಹೋಗುತ್ತಾರೆ. ರಾತ್ರಿಯಿಡೀ ಸೋಶಿಯಲ್
ಮಿಡಿಯಾದಲ್ಲೇ ಕಾಲ ಕಳೆಯುತ್ತಾರೆ. ಇದ್ರಿಂದ ಹದಿಹರೆಯದ ಮಕ್ಕಳಲ್ಲಿ ನಿದ್ರೆಯ ಅಭಾವ
ಉಂಟಾಗುತ್ತದೆ. ನಿದ್ದೆ ಕಡಿಮೆ ಆದರೆ ಅದು ಕಲಾಜನ್ ಉತ್ಪಾದನೆ ಮೇಲೆ ಪರಿಣಾಮ
ಬೀರುತ್ತದೆ. ಇದು ಚರ್ಮದ ಮೇಲೆ ಪರಿಣಾಮ ಬೀರಿ ಅಕಾಲಿಕ ವಯಸ್ಸಾದಂತೆ ಕಾಣಲು
ಕಾರಣವಾಗುತ್ತದೆ.
4. ಸಿಗರೇಟ್ ಸೇವನೆ
ಸಿಗರೇಟ್ ಸೇವನೆ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದಲ್ಲ. ಇದು ಚರ್ಮದ ಮೇಲೂ ಕೂಡ
ಪರಿಣಾಮವನ್ನು ಬೀರುತ್ತದೆ. ಅತಿಯಾದ ಸಿಗರೇಟ್ ಸೇವನೆಯಿಂದ ಚರ್ಮ ಕಾಂತಿಯನ್ನು
ಕಳೆದುಕೊಂಡು ವಯಸ್ಸಾದಂತೆ ಕಾಣುವಂತೆ ಮಾಡುತ್ತದೆ. ಹೊಗೆಯ ಸಂಯುಕ್ತ ವಸ್ತುಗಳು ಕಾಲಜನ್
ಪ್ರಮಾಣವನ್ನು ಕೂಡ ಕಡಿಮೆ ಮಾಡುತ್ತದೆ. ಕಲಾಜನ್ ದುರ್ಬಲವಾದಂತೆ ಇದು ಚರ್ಮದ ಮೇಲಿನ
ಅಕಾಲಿಕ ಸುಕ್ಕುಗಳಿಗೆ ಕಾರಣವಾಗುತ್ತದೆ.
5. ಅತಿಯಾಗಿ ಮಾಲಿನ್ಯಕ್ಕೆ ಒಡ್ಡಿಕೊಳ್ಳುವುದು
ಗಾಳಿಯಲ್ಲಿರುವ ಮಾಲಿನ್ಯಕಾರಕ ಕಣಗಳು ಆಕ್ಸಿಡೇಟಿವ್ ಒತ್ತಡವನ್ನು ಉಂಟುಮಾಡಬಹುದು. ಇದು
ಚರ್ಮದಲ್ಲಿ ಸುಕ್ಕುಗಳು ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ವಾಯು ಮಾಲಿನ್ಯಕಾರಕ ಅಂಶಗಳು
ಎಲಾಸ್ಟಿನ್ ಮತ್ತು ಕಾಲಜನ್ ಅನ್ನು ಹಾನಿಗೊಳಿಸುತ್ತದೆ. ಇದು ಸುಕ್ಕುಗಳ ಅಪಾಯವನ್ನು
ಹೆಚ್ಚಿಸುತ್ತದೆ. ಹೀಗಾಗಿ ಹೊರಗಡೆ ಹೋಗುವಾಗ ಮುಖಕ್ಕೆ ಬಟ್ಟೆಯನ್ನು ಕಟ್ಟಿಕೊಳ್ಳುವುದರ
ಮೂಲಕ ಚರ್ಮದ ರಕ್ಷಣೆಯನ್ನು ಮಾಡಬಹುದು.
6. ಒಣ ಚರ್ಮ
ನಮ್ಮಲ್ಲಿ ಅನೇಕರು ಒಣ ಚರ್ಮವನ್ನು ಹೊಂದಿರುತ್ತಾರೆ. ಒಣ ಚರ್ಮದ ಆರೈಕೆ ಮಾಡೋದು
ತುಂಬಾನೇ ಮುಖ್ಯವಾಗುತ್ತದೆ. ಇಲ್ಲದಿದ್ದರೆ ಚರ್ಮ ಒಡೆದಂತೆ ಕಾಣಿಸಿಕೊಳ್ಳುತ್ತದೆ. ಹಾಗೂ
ತುರಿಕೆ ಹಾಗೂ ಕಿರಿ ಕಿರಿ ಕೂಡ ಉಂಟಾಗುತ್ತದೆ. ಒಡೆದ ಚರ್ಮವು ಕಾಂತಿಯನ್ನು
ಕಳೆದುಕೊಂಡಿರುತ್ತದೆ. ಹಾಗೂ ವಯಸ್ಸಾದಂತ ಲಕ್ಷಣಗಳು ಬೇಗನೆ ಕಾಣಿಸಿಕೊಳ್ಳುತ್ತದೆ.
ಹೀಗಾಗಿ ಮೋಸ್ಚರೈಸಿಂಗ್ ಕ್ರೀಮ್‌ಗಳನ್ನು ಹಚ್ಚೋದನ್ನು ಮರೀಬೇಡಿ. ಜೊತೆಗೆ ಸಾಕಷ್ಟು
ನೀರು ಕುಡಿಯಿರಿ.
7. ಮಧ್ಯಪಾನ ಮಾಡುವುದು
ಹದಿಹರೆಯದ ವಯಸ್ಸಿನಲ್ಲಿ ಮಕ್ಕಳು ಕುಡಿಯೋ ಚಟವನ್ನು ಮೈಗೂಡಿಸಿಕೊಂಡಿರುತ್ತಾರೆ.
ಆರೋಗ್ಯದ ದೃಷ್ಟಿಯಿಂದ ಇದು ಒಳ್ಳೆಯದಲ್ಲ. ಆಲ್ಕೊಹಾಲ್ ಶುಷ್ಕತೆಯನ್ನು ಉಂಟುಮಾಡುತ್ತದೆ
ಏಕೆಂದರೆ ಇದು ಮೂತ್ರವರ್ಧಕವಾಗಿದೆ. ಇದು ಚರ್ಮ ಸೇರಿದಂತೆ ದೇಹದ ವಿವಿಧ ಅಂಗಗಳನ್ನು
ನಿರ್ಜಲೀಕರಣಗೊಳಿಸುತ್ತದೆ. ಅತಿಯಾದ ಆಲ್ಕೊಹಾಲ್ ಸೇವನೆಯಿಂದ ಚರ್ಮದ ತೇವಾಂಶದ ನಷ್ಟವು
ಸುಕ್ಕುಗಳಿಗೆ ಕಾರಣವಾಗಬಹುದು.
8. ಡ್ರಗ್ಸ್ ಸೇವನೆ
ಚಿಕ್ಕ ವಯಸ್ಸಿನಲ್ಲಿ ಮಕ್ಕಳಿಗೆ ಕೈ ತುಂಬಾ ದುಡ್ಡು ಕೊಡಬಾರದು ಅನ್ನೋದಕ್ಕೆ ಒಂದು
ಕಾರಣವಿದೆ. ಕೈ ತುಂಬಾ ಹಣವಿದ್ದಾಗ ಏನು ಖರೀದಿಸಬೇಕು? ಏನನ್ನೂ ಖರೀದಿಸಬಾರದು ಅನ್ನೋದು
ಗೊತ್ತಾಗೋದಿಲ್ಲ. ಇಂತಹ ಸಮಯದಲ್ಲಿ ಡ್ರಗ್ಸ್ ಸೇವನೆಯಂತಹ ದುಸ್ಚಟಗಳನ್ನು
ಕಲಿತುಕೊಳ್ಳುತ್ತಾರೆ. ಮಾದಕ ದ್ರವ್ಯದ ಬಳಕೆಯು ಸಾಮಾನ್ಯವಾಗಿ ಚರ್ಮದ ವಯಸ್ಸನ್ನು
ಉಲ್ಬಣಗೊಳಿಸುತ್ತದೆ. ಇದು ಎಲಾಸ್ಟಿನ್ ಮತ್ತು ಕಾಲಜನ್ ಅನ್ನು ಹಾನಿಗೊಳಿಸುತ್ತದೆ.
ಮತ್ತು ಚರ್ಮದ ತೇವಾಂಶದ ಮೇಲೆ ಪರಿಣಾಮ ಬೀರುತ್ತದೆ.
ಈ ಎಲ್ಲಾ ಅಭ್ಯಾಸಗಳು ನಮ್ಮ ದೇಹಕ್ಕೆ ಮಾತ್ರ ಹಾನಿಯುಂಟು ಮಾಡುವುದಲ್ಲದೇ ನಮ್ಮ ಚರ್ಮದ
ಮೇಲೂ ಅತೀವ ಪರಿಣಾಮವನ್ನು ಬೀರುತ್ತದೆ. ಹೀಗಾಗಿ ಈ ಎಲ್ಲಾ ಅಭ್ಯಾಸಗಳನ್ನು ಇಂದೇ ಬಿಟ್ಟು
ಬಿಡಿ.